ತಿಲಸ್ನಾಯೀ ತಿಲೋದ್ವರ್ತೀ ತಿಲಹೋಮೀ ತಿಲೋದಕಿ |
ತಿಲಭುಕ್ ತಿಲದಾತಾ ಚ ಷಟ್ ತಿಲಾಃ ಪಾಪನಾಶನಾಃ ||
ಪುಷ್ಯಮಾಸದಲ್ಲಿ ಆರು ಬಗೆಯಲ್ಲಿ ಎಳ್ಳನ್ನು ಉಪಯೋಗಿಸುವದಕ್ಕೆ `ಷಟ್ತಿಲ' ಏಕಾದಶಿ ಎಂದು ಕರೆಯುತ್ತಾರೆ. ಈ ವ್ರತದ ಬಗ್ಗೆ ಶ್ರೀಮನ್ನಾರಾಯಣನು ಬ್ರಹ್ಮರ್ಷಿ ನಾರದರಿಗೆ ವಿವರಿಸಿದರು.
ದೃಷ್ಟಾಂತ
ಒಮ್ಮೆ ನಾರದರು ತ್ರಿಲೋಕ ಸಂಚಾರ ಮುಗಿಸಿಕೊಂಡು ವೈಕುಂಠಕ್ಕೆ ಬರುತ್ತಾರೆ. ಶ್ರೀಹರಿ ಮತ್ತು ಮಹಾಲಕ್ಷ್ಮೀಗೆ ಅಭಿವಂದನೆ ಸಲ್ಲಿಸಿ ಕುಶಲೋಪರಿ ಮಾತನಾಡುತ್ತ ಕುಳಿತಿರುತ್ತಾರೆ. ಆಗ ನಾರದರು `ಹೇ ಪ್ರಭು, ಷಟ್ತಿಲ ಏಕಾದಶಿ ವ್ರತಾಚರಣೆ, ವಿಧಿ-ವಿಧಾನ, ಪುಣ್ಯಫಲದ ಬಗ್ಗೆ ತಿಳಿಸು' ಎಂದು ಪ್ರಾರ್ಥಿಸುತ್ತಾರೆ.
ಹಿಂದೆ ಬ್ರಾಹ್ಮಣ ಸ್ತ್ರೀ ಒಬ್ಬಳು ಇದ್ದಳು. ಅವಳು ನಿತ್ಯ ಶ್ರೀಹರಿಯನ್ನು ಪೂಜಿಸುತ್ತಿದ್ದಳು. ನಾಮಪೂಜಾ, ನಾಮವ್ರತಗಳನ್ನು ಆಚರಿಸುತ್ತಿದ್ದಳು. ಒಮ್ಮೆಯಂತೂ ಒಂದು ತಿಂಗಳ ಪರ್ಯಂತ ಕಠಿಣ ವ್ರತವನ್ನು ಮಾಡಿದಳು. ಪರಿಣಾಮ ಅವಳ ಶರೀರವೇನೋ ಪರಿಶುದ್ಧವಾಯಿತು. ಆದರೆ ಅವಳೆಂದೂ ಅನ್ನದಾನ ಮಾಡಲಿಲ್ಲ. ಇವಳು ಶ್ರೀಕೃಷ್ಣನ ಭಕ್ತೆ ಆದರೂ ಇವಳು ಮುಂದೆ ವೈಕುಂಠಕ್ಕೆ ಬಂದರೂ ಅತೃಪ್ತಳಾಗೆ ಇರಬೇಕಾಗುವದಲ್ಲಾ ಎಂದು ಭಗವಂತನಿಗೆ ಅನ್ನಿಸಿತು.
ಆದ್ದರಿಂದ ಇವಳಿಂದ ಅನ್ನದಾನವಾಗಬೇಕು ಎಂದುಕೊಂಡು ಶ್ರೀಹರಿಯೇ ಭಿಕ್ಷುಕನಾಗಿ ಅವಳಿರುವ ಆಶ್ರಮಕ್ಕೆ ಹೋಗಿ ಭಿಕ್ಷೆ ಬೇಡಿದ. ಅದಕ್ಕವಳು ಮಣ್ಣಿನ ಚಿಕ್ಕ ಹೆಂಟೆಯನ್ನು ದಾನವಾಗಿ ನೀಡಿದಳು. ಶ್ರೀನಾರಾಯಣನು ಅದನ್ನೇ ತೆಗೆದುಕೊಂಡು ವೈಕುಂಠಕ್ಕೆ ಮರಳಿದ. ಸ್ವಲ್ಪ ಕಾಲದ ನಂತರ ಅವಳು ದೇಹ ತ್ಯಜಿಸಿ ವೈಕುಂಠಕ್ಕೆ ಬಂದಳು.
ಆಗ ಅವಳಿಗೆ ವಾಸಿಸಲೊಂದು ಆಶ್ರಮ, ಒಂದು ಮಾವಿನ ಮರವನ್ನು ಕಲ್ಪಿಸಲಾಯಿತು. ಇದರಿಂದ ಅವಳು ಅತೃಪ್ತಳಾಗಿ `ಶ್ರೀಹರಿ ನಾನು ನಿನ್ನನ್ನು ಭಕ್ತಿಯಿಂದ ಪೂಜಿಸಿದ್ದೆ, ನನಗೇಕೆ ಈ ಗತಿ ಬಂತು' ಎಂದು ಗೋಳಾಡಿದಳು. ಆಗ ಶ್ರೀಕೃಷ್ಣನು ಮತ್ತೆ ಅವಳಿಗೆ ಪ್ರತ್ಯಕ್ಷವಾಗಿ `ನೀನು ನನ್ನ ಭಕ್ತೆ, ಧರ್ಮಪರಾಯಣೆ ನಿಜ,
ಆದರೆ ನೀನು ಅನ್ನದಾನ ಮಾಡಲಿಲ್ಲ. ಸ್ವತ: ಜಗನ್ನಿಯಾಮಕನಾದ ನಾನೇ ಬಂದು ಭಿಕ್ಷೆ ಬೇಡಿದೆ. ಆಗ ನೀನು ಒಂದು ಚಿಕ್ಕ ಮಣ್ಣ ಹೆಂಟೆಯನ್ನು ದಾನವಾಗಿ ಕೊಟ್ಟಿದ್ದೆ ಅಲ್ಲವೇ ?. ಅದರ ಫಲವೇ ಇದು' ಎಂದ. ಅದಕ್ಕವಳು ಭಗವಂತನೇ ಈ ಸಂಕಟದಿಂದ ಪಾರಾಗುವ ಬಗೆ ಹೇಗೆ ತಿಳಿಸು ಎಂದು ಕೇಳಿಕೊಂಡಳು.
ಮಗಳೇ ಚಿಂತಿಸಬೇಡ, ನಿನ್ನ ಭೆಟ್ಟಿಗೆಂದು ಆಶ್ರಮಕ್ಕೆ ದೇವಕನ್ಯೆಯರು ಬರುವರು. ಆಗ ಆಶ್ರಮದ ದ್ವಾರ ತೆಗೆದಿಡು, ಅವರನ್ನು ಉಪಚರಿಸು. ಅವರು ನಿನಗೆ ಷಟ್ತಿಲ ಏಕಾದಶಿ ವ್ರತವನ್ನು ಹೇಳುವರು. ಅದರಂತೆ ವ್ರತಾಚರಣೆ ಮಾಡು. ಎಂದು ಹೇಳಿ ಶ್ರೀಮನ್ನಾರಾಯಣನು ಅಂತರ್ದಾನನಾದನು.
ಮುಂದೆ ಭಗವಂತನ ಪ್ರೇರಣೆಯಂತೆ ಅವಳ ಆಶ್ರಮಕ್ಕೆ ದೇವಕನ್ಯೆಯರು ಬಂದರು, ಅವಳಿಗೆ ಷಟ್ ತಿಲ ಏಕಾದಶಿ ವ್ರತದ ಬಗ್ಗೆ ತಿಳಿಸಿದರು. ಅದರಂತೆ ಅವಳು ವ್ರತ ಆಚರಿಸಿದಳು. ಅವಳ ಆಶ್ರಮದಲ್ಲಿ ಅನ್ನಕ್ಕೆಂದೂ ಕೊರತೆಯಾಗದಂತೆ ದವಸ-ಧಾನ್ಯದಿಂದ ತುಂಬಿತುಳುಕುತ್ತದೆ. ದೇವರ್ಷಿ ನಾರದರೇ, ಯಾರು ಈ ಏಕಾದಶಿ ವ್ರತವನ್ನು ಆಚರಿಸುವರೋ ಅವರಿಗೆ ಅಪ್ರತಿಮ ಸಂಪತ್ತು, ಸೌಭಾಗ್ಯ ಮತ್ತು ಅಲಭ್ಯವಾದ ಮುಕ್ತಿ ಲಭಿಸುತ್ತದೆ. ಎಂದು ನಾರದರಿಗೆ ಭಗವಂತನು ಷಟ್ ತಿಲ ಏಕಾದಶಿಯ ಮಹತ್ವವನ್ನು ಹೇಳಿದನು.
ವ್ರತ ವಿಧಿ-ಫಲ
ಪುಷ್ಯ ಮಾಸವೇ ಅತ್ಯಂತ ಪಾವನವಾದದು. ಪೂಜೆ, ಜಪ-ತಪ ದಾನಕ್ಕೆ ಶ್ರೇಷ್ಠವಾದದ್ದು. ಷಟ್ತಿಲ ಏಕಾದಶಿ ವ್ರತದಂದು ವಿಧಿವತ್ತಾಗಿ ಭಗವಂತನನ್ನು ಪೂಜಿಸಬೇಕು. ಉಪವಾಸ ವ್ರತವನ್ನು ಮಾಡಿ ಅಷ್ಟಾಕ್ಷರ, ದ್ವಾದಶಾಕ್ಷರ ಮಂತ್ರಗಳ ಜಪ ಮಾಡಬೇಕು. ದ್ವಾದಶಿಯಂದು ಮಕರ ಸಂಕ್ರಮಣ ಕಾಲದಲ್ಲಿ ಹೇಳಿದಂತೆ ಎಳ್ಳಿನ ಪದಾರ್ಥಗಳನ್ನು ಮಾಡಿ ದೇವರಿಗೆ ನೈವೇದ್ಯಮಾಡಿ ದಾನ ಕೊಡಬೇಕು. ಉಪವಾಸ ಆಚರಣೆ, ಜಪ, ಪೂಜಾ, ದಾನಗಳಿದ ಅಪೇಕ್ಷಿತ ಎಲ್ಲ ಶುಭಫಲಗಳೂ ದೊರೆಯುವವು.
ಶ್ರೀಕೃಷ್ಣಾರ್ಪಣಮಸ್ತು
0 Comments