ಪಾಶಾಂಕುಶ ಏಕಾದಶಿ ಮಹತ್ವ
ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ ಸ್ತುನ್ವಂತಿದಿವೈಃಸ್ತವೈ-
ವೇದೈಃಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಮಗಾಃ |
ಧ್ಯಾನಾವಸ್ತಿತ ತದ್ ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ
ಯಸ್ತಾನಂ ನ ವಿದುಃ ಸುರಾಸುರಗಣಾ ದೇವಾಯ ತಸ್ಮೈ ನಮಃ ||
ಅಶ್ವಿನ ಮಾಸ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿ ವ್ರತಕ್ಕೆ ಪಾಶಾಂಕುಶ ಏಕಾದಶಿ ಎನ್ನುವರು. ಈ ಕುರಿತು ಬ್ರಹ್ಮವೈವರ್ತ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪಾಶಾಂಕುಶ ಏಕಾದಶಿಯ ದಿನ ದೇವರ ಶ್ರೀಅನಂತಪದ್ಮನಾಭ ರೂಪದ ಧ್ಯಾನ ಆವಾಹನಾದಿ ಪೂಜೆ ಸಲ್ಲಿಸಬೇಕು. ಈ ವ್ರತ ಆಚರಣೆಯಿಂದ ಇಹಲೋಕದಲ್ಲಿ ಎಲ್ಲ ಭೋಗಭಾಗ್ಯವ ಪಡೆದು ವಿಷ್ಣುಲೋಕ ಪ್ರಾಪ್ತವಾಗುವುದು.
ಏಕಾದಶಿ ಭಕ್ತಿಯ ಪ್ರತೀಕ, ಉಪವಾಸಾಧಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ವಿಷ್ಣುವಿನ ನಾಮಜಪದಿಂದ ತೀರ್ಥಕ್ಷೇತ್ರ ಸಂದರ್ಶಿಸಿದ ಪುಣ್ಯ ಲಭಿಸುತ್ತದೆ. ಶ್ರೀಕೃಷ್ಣ ಮಂತ್ರ, ಶ್ರೀರಾಮಮಂತ್ರ, ಶ್ರೀವಿಷ್ಣುಸಹಸ್ರನಾಮ ಮೊದಲಾದ ಜಪ ಮತ್ತು ಪಾರಾಯಣ ಮಾಡಬೇಕು.
ಭಗವಂತನ ನಾಮಸ್ಮರಣೆಯನ್ನು ನಿತ್ಯವೂ ಮಾಡುತ್ತಿದ್ದರೆ ಯಮರಾಜ ಕೂಡ ಹತ್ತಿರ ಸುಳಿಯುವದಿಲ್ಲ. ಯಾರು ಶ್ರೀಕೃಷ್ಣನ್ನು ಸ್ಮರಿಸುವರೋ ಅವರಿಗೆ ನೂರು ಅಶ್ವಮೇಧ, ನೂರು ರಾಜಸೂಯ ಯಾಗದ ಫಲ ದೊರೆಯುವದು.
ಈ ಏಕಾದಶಿ ಮಾಡಿದರೆ ಮೂರು ಲೋಕದಲ್ಲೂ ಸ್ಥಾನ ಲಭಿಸುವದು. ಈ ವ್ರತದ ವಿಶೇಷವೆಂದರೆ ಆಚರಿಸಿದವರಿಗೆ ಯಮರಾಜ ಸ್ವಾತಂತ್ರ್ಯ ಕೊಡುತ್ತಾನೆ, ಸ್ವರ್ಗಕ್ಕೆ ಮಾರ್ಗ ತೋರುತ್ತಾನೆ, ಒಳ್ಳೆಯ ಕುಟುಂಬ, ಆರೋಗ್ಯ, ಸಂಪತ್ತು ಕೊಟ್ಟು ಕಾಯುತ್ತಾನೆ.ಗಂಗಾ ಗಯಾ, ಕಾಶಿ, ಪುಷ್ಕರ ಕ್ಷೇತ್ರ ದರ್ಶನ ಮಾಡಿದ ಪುಣ್ಯ ಪಾಶಾಂಕುಶ ಏಕಾದಶಿಯಿಂದ ಬರುವುದು. ಯಮನ ಪಾಶ-ಅಂಕುಶಗಳ ಭಯ ಅಂದರೆ ಮೃತ್ಯುಭಯ ಇರುವದಿಲ್ಲ. ಅಪಮೃತ್ಯು ದೋಷ ಪರಿಹಾರವಾಗುತ್ತದೆ.
ಏಕಾದಶಿ ರಾತ್ರಿ ಜಾಗರಣೆ, ಜಪ, ಪೂಜೆ, ಪಾರಾಯಣ ಮಾಡಿದವರ ಹತ್ತು ತಲೆಮಾರಿನ ಪಿತೃವರ್ಗಕ್ಕೆ ಮುಕ್ತಿದೊರೆಯುತ್ತದೆ. ಅವರು ವೈಕುಂಠ ಸೇರುತ್ತಾರೆ. ಅವರೆಲ್ಲ ಪೀತಾಂಬರವನ್ನುಟ್ಟು , ವನಮಾಲೆಗಳಿಂದ ಅಲಂಕೃತರಾಗಿ ಗರುಡನ ಮೇಲೇರಿ ನಾರಾಯಣನೊಂದಿಗೆ ವೈಕುಂಠಕ್ಕೆ ತೆರಳುವರು.
ತಿಲದಾನ, ಸುವರ್ಣದಾನ, ಭೂಮಿದಾನ, ಗೋದಾನ, ಧನಧಾನ್ಯದಾನ, ಕುಂಭದಾನ, ಛತ್ರದಾನ ಮಾಡುವರೋ ಅವರು ನರಕವನ್ನೇ ನೋಡಲಾರರು. ಎಲ್ಲ ರೋಗಗಳಿಂದ ಮುಕ್ತರಾಗುವರು. ಈ ಏಕಾದಶಿ ಮಾಡುವುದರಿಂದ ಮನೋಕಾಮನೆ ಈಡೇರುವುದು.
ದೃಷ್ಟಾಂತ
ವಿಂದ್ಯಪರ್ವತದಲ್ಲಿ ಮಹಾಕ್ರೂರಿ ಹಾಗೂ ಕೋಪಿಷ್ಠನಾದ ಕ್ರೋಧನ ಎಂಬವ ವಾಸಿಸುತ್ತಿರುತ್ತಾನೆ. ಅವನಿಗೆ ಅಂತಿಮ ಸಮಯ ಬಂದಾಗ ಯಮರಾಜ ಅವನನ್ನು ಎಳೆದು ತರಲು ದೂತರಿಗೆ ತಿಳಿಸುತ್ತಾನೆ. ಅದ್ಹೇಗೋ ಯಮದೂತರು ಕ್ರೋಧನನಿಗೆ ಈ ಬಗ್ಗೆ ಮೊದಲೇ ತಿಳಿಸುತ್ತಾರೆ.
ಮೃತ್ಯುಭಯದಿಂದ ಕ್ರೋಧನ ಅಂಗೀರಸ ಋಷಿಯ ಆಶ್ರಮ ಸೇರುತ್ತಾನೆ. ಯಮಲೋಕಕ್ಕೆ ಹೋಗುವುದನ್ನು ತಪ್ಪಿಸುವಂತೆ ಋಷಿಗಳಲ್ಲಿ ಪ್ರಾರ್ಥಿಸುತ್ತಾನೆ. ಆಗ ಋಷಿಗಳು ಪಾಪಾಂಕುಶ ಏಕಾದಶಿ ಆಚರಿಸಿ ಪಾಪಮುಕ್ತನಾಗಿ ಸ್ವರ್ಗಸ್ಥನಾಗಲು ತಿಳಿಸುವರು. ಅದರಂತೆ ಕ್ರೋಧನ ಪಾಶಾಂಕುಶ ಏಕಾದಶಿ ಆಚರಿಸಿ ವಿಷ್ಣುಲೋಕಕ್ಕೆ ತೆರಳುತ್ತಾನೆ.
ಶ್ರೀಕೃಷ್ಣಾರ್ಪಣಮಸ್ತು.
0 Comments