ಅಶ್ವತ್ಥಾಮಾ ಬಲಿರ್ವ್ಯಾಸೋ
ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ || ಇದು ಮಾರ್ಕಂಡೇಯಪುರಾಣದ ಶ್ಲೋಕ. ಈ ಶ್ಲೋಕದಂತೆ ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ಕಪಾಚಾರ್ಯ, ಪರಶುರಾಮ ಇಷ್ಟು ಜನ ಚಿರಂಜೀವಿಗಳು. ಅಂದರೆ ತುಂಬಾ ವರ್ಷಗಳ ತನಕ ಬದುಕಿರುವವರು ಅಂತ. ಆದರೆ ಮೊನ್ನೆ ನಾನು ಇವರೆಲ್ಲ ಶಾಶ್ವತವಾಗಿ ಜೀವಿಸಿರುವುದಿಲ್ಲ ಎಂದು ಬರೆದದ್ದಕ್ಕೆ ಬಹಳ ಜನರಿಗೆ ಬೇಸರವಾಗಿತ್ತು. ಅದಕ್ಕಾಗಿ ಚಿರಂಜೀವಿ ಎಂದರೇನು ಎಂದು ತಡಕಾಡಿದೆ. ಎಲ್ಲಿಯೂ ಸಾವಿಲ್ಲದವರು ಅಂತೇನೂ ಇಲ್ಲ. ದೀರ್ಘಕಾಲ ಜೀವಿಸಿರುವವರು ಅಂತ ಮಾತ್ರವೇ ಅರ್ಥ ದೊರಕಿತು. ಕಾಗೆ ಬಹಳ ಕಾಲ ಜೀವಿಸಿರುತ್ತದೆಯಂತೆ ಅದಕ್ಕೆ ಚಿರಂಜೀವಿ ಎಂದರೆ ಕಾಕಃ ಎಂದು ಮೇದಿನೀ ಎನ್ನು ಗ್ರಂಥ ಹೇಳುತ್ತದೆ. ಇನ್ನು ರಾಜ ನಿರ್ಘಂಟದಲ್ಲಿ ಶಾಲ್ಮಲೀಮರ ಮತ್ತು ಜೀವಕವೃಕ್ಷವು ಅತೀ ದೀರ್ಘ ಆಯುಸ್ಸನ್ನು ಪಡೆದಿದೆ ಎನ್ನಲಾಗಿದೆ. ಇನ್ನು ರಾಮಾಯಣದಲ್ಲಿ ’ಅಥ ರಾಜ್ಞೋ ಬಭೂವೈವಂ ವೃದ್ಧಸ್ಯ ಚಿರಜೀವಿನಃ’ ೨:೧:೩೬ರಲ್ಲಿ ಹೇಳಿರುವಲ್ಲಿ ಸಹ ಬಹುಕಾಲ ಜೀವಿಸಿರುವುದನ್ನು ಹೇಳಲಾಗಿದೆ. ಇನ್ನು ಧನ್ವಂತರೀ ಮತ್ತು ಅಷ್ಟಾಂಗ ನಿಘಂಟಿನಲ್ಲಿಯೂ ಚಿರಂಜೀವಿಗಳ ಕುರಿತಾಗಿ ಬರುತ್ತದೆ. ಆದರೆ ಅಲ್ಲಿಯೂ ಆರೋಗ್ಯಭರಿತ ದೀರ್ಘಾಯುಷ್ಯವನ್ನು ಹೇಳಿದೆ.
ಮಹಾಭಾರತದ ವನಪರ್ವದ ೩ನೇ ಅಧ್ಯಾಯದಲ್ಲಿ ಸೂರ್ಯನನ್ನು ಉದ್ದೇಶಿಸಿ ಹೇಳುವಾಗ
ಸರ್ವರೋಗೈರ್ವಿರಹಿತಾಃ ಸರ್ವಪಾಪವಿವರ್ಜಿತಾಃ | ತ್ವದ್ಭಾವಭಕ್ತಾಃ ಸುಖಿನೋ ಭವನ್ತಿ ಚಿರಜೀವಿನಃ || ೬೬ ||
ಸೂರ್ಯದೇವ, ಅನನ್ಯಭಕ್ತಿಯಿಂದ ನಿನ್ನನ್ನು ಯಾರು ಅರ್ಚಿಸುತ್ತಾರೋ ಅವರು ಎಲ್ಲಾರೋಗಗಳಿಂದಲೂ ಮತ್ತು ಪಾಪಗಳಿಂದಲೂ ಮುಕ್ತರಾಗುತ್ತಾರೆ. ಅವರಿಗೆ ಆಪತ್ತುಗಳೂ ಮತ್ತು ಯಾವುದೇ ಬಾಧೆಗಳೂ ಉಂಟಾಗುವುದಿಲ್ಲ. ನಿನ್ನನ್ನು ಆರಾಧಿಸುವ ಭಕ್ತರು ಸುಖಿಗಳೂ, ಚಿರಂಜೀವಿಗಳೂ ಆಗುತ್ತಾರೆ ಎನ್ನುವಾಗ ಸೂರ್ಯನಿಂದ ರೋಗ ಬಾಧೆ ನಿವಾರಣೆಯಾಗಿ ದೀರ್ಘಕಾಲ ಬದುಕಿರುತ್ತಾರೆ ಎಂದ ಹಾಗಾಗುತ್ತೆ.
ವನಪರ್ವದ ೧೯೩ನೇ ಅಧ್ಯಾಯದಲ್ಲಿ ಬಕಮಹರ್ಷಿಯ ಕಥೆ ಬರುತ್ತದೆ ಅಲ್ಲಿ ಆ ಮಹರ್ಷಿಗೆ ಚಿರಂಜೀವಿತ್ವ ಪ್ರಾಪ್ತವಾದ ಕುರಿತು ಮಾರ್ಕಂಡೇಯರು ಹೇಳುತ್ತಾರೆ “ಬಕಮಹರ್ಷಿಯು ಮಹಾತಪಸ್ವಿಯಾದ ದಲ್ಭ್ಯಮಹರ್ಷಿಗಳ ಮಗನಾಗಿದ್ದ. ದೇವಾಸುರರ ಯುದ್ಧ ಮುಗಿದು ಅಸುರರು ಸೋತು ದೇವತೆಗಳು ಗೆದ್ದ ನಂತರ ಇಂದ್ರನು ಮೂರು ಲೋಕಗಳಿಗೂ ಸಾರ್ವಭೌಮನಾಗುತ್ತಾನೆ. ಇಂದ್ರನು ತ್ರೈಲೋಕ್ಯಾಧಿಪತ್ಯವನ್ನು ತೆಗೆದುಕೊಂಡ ನಂತರ ಪರ್ಜನ್ಯನು ಮಳೆಗರೆಯುತ್ತಾನೆ. ಭೂಮಿ ಸಮೃದ್ಧವಾಗುತ್ತದೆ. ಯಾವುದೇ ರೋಗ ಇರಲಿಲ್ಲ. ಪ್ರಜೆಗಳು ಧರ್ಮಿಷ್ಠರಾಗಿದ್ದರು. ಇದನ್ನು ನೋಡಲಿಕ್ಕಾಗಿ ಇಂದ್ರ ಅಂತರಿಕ್ಷದಲ್ಲಿ ಸುತ್ತಾಡುತ್ತಾನೆ ಆಗ ಅವನಿಗೆ ಭೂಮಿಗೆ ಬರಬೇಕೆನ್ನು ಆಶೆಯಾಗುತ್ತದೆ. ಇಂದ್ರನು ಭೂಮಿಗಿಳಿದು ಸುಂದರವಾದ ಒಂದು ಆಶ್ರಮದ ಬಳಿಗೆ ತೆರಳುತ್ತಾನೆ. ಅದು ಪೂರ್ವದಿಕ್ಕಿನಲ್ಲಿದ್ದು ಸಮುದ್ರದ ಸಮೀಪದಲ್ಲಿತ್ತು. ಆಶ್ರಮಕ್ಕೆ ಇಂದ್ರನು ಬಂದು ಆಶ್ರಮದಲ್ಲಿದ್ದ ಬಕ ಮಹರ್ಷಿಯನ್ನು ನೋಡುತ್ತಾನೆ. ಬಕಮಹರ್ಷಿಯೂ ಇಂದ್ರನು ತನ್ನ ಆಶ್ರಮಕ್ಕೆ ಬಂದುದನ್ನು ನೋಡಿ ಸಂತುಷ್ಟನಾಗುತ್ತಾನೆ. ಬಕನು ಇಂದ್ರನನ್ನು ಸತ್ಕರಿಸಿಸುತ್ತಾನೆ. ನಂತರ ಇಂದ್ರನು ಬಕಮಹರ್ಷಿಯನ್ನು ಕೇಳುತ್ತಾನೆ. “ಮಹರ್ಷೇ ನೀನು ಹುಟ್ಟಿ ಅನೇಕ ಸಹಸ್ರ ವರ್ಷಗಳಾಗಿವೆ. ಆದುದರಿಂದ ಚಿರಂಜೀವಿಗಳಿಗಿರಬಹುದಾದ ಕಷ್ಟ ಸುಖಗಳ ಅನುಭವವು ನಿನಗೆ ಸಂಪೂರ್ಣವಾಗಿರುವುದು. ಚಿರಂಜೀವಿಗಳಿಗೆ ಪ್ರಾಪ್ತವಾಗಬಹುದಾದ ದುಃಖದ ವಿಷಯವನ್ನು ನನಗೆ ಹೇಳು. ಈ ವಿಷಯವನ್ನು ನಿನ್ನಿಂದ ತಿಳಿಯಬೇಕೆಂದೇ ಇಲ್ಲಿಗೆ ಬಂದಿರುವೆನು ಎನ್ನುತ್ತಾನೆ.” ಬಕಮಹರ್ಷಿ ’ಅಪ್ರಿಯೈಃ ಸಹ ಸಂವಾಸಃ ಪ್ರಿಯೈಶ್ಚಾಪಿ ವಿನಾಭವಃ | ಅಸದಿಃ ಸ್ಭಮ್ಪ್ರಯೋಗಶ್ಚ ತದ್ದುಃಖಂ ಚಿರಜೀವಿನಾಮ್’
“ಇಂದ್ರನೇ! ನಮಗೆ ಬೇಡವಾದವರೊಡನೆ ಇರಬೇಕಾಗಿ ಬರುವುದು; ಬೇಕಾದವರಿಂದ ಬಹುಬೇಗ ವಿಯೋಗಹೊಂದಬೇಕಾಗುವುದು; ದುರ್ಜನರೊಡನೆ ಸಹವಾಸಮಾಡಬೇಕಾಗುವುದು.
ದುಃಖ ಪುತ್ರದಾರವಿನಾಶೋಽತ್ರ ಜ್ಞಾತೀನಾಂ ಸುಹೃದಾಮಪಿ |
ಪರೇಷ್ವಾಯತ್ತತಾಕೃಚ್ಛ್ರಂ ಕಿಂ ನು ದುಃಖತರಂ ತತಃ || ಚಿರಂಜೀವಿಯಾದವನು ಮಗನ ಮರಣ, ಮೊಮ್ಮಗನ ಮರಣ, ಹೆಂಡತಿಯ ವಿಯೋಗ, ಬಂಧುಮಿತ್ರರ ವಿನಾಶ ಇತ್ಯಾದಿಗಳನ್ನು ನೋಡಿಯೇ ತೀರಬೇಕಾಗುವುದು. ಜೀವನ ನಿರ್ವಹಣೆಗಾಗಿ ಪರಾಶ್ರಯವನ್ನು ಮಾಡಬೇಕಾಗಿ ಬರುವುದು. ಇದಕ್ಕಿಂತಲೂ ದುಃಖತರವಾದುದೇನಿದೆ? ಎನ್ನುತ್ತಾನೆ.
ಅಕುಲಾನಾಂ ಕುಲೇ ಭಾವಂ ಕುಲೀನಾನಾಂ ಕುಲಕ್ಷಯಮ್ | ಸಂಯೋಗಂ ವಿಪ್ರಯೋಗಂ ಚ ಪಶ್ಯನ್ತಿ ಚಿರಜೀವಿನಃ || ಕುಲಹೀನರಾದವರ ಔನ್ನತ್ಯ ನೋಡಬೇಕು. ಸತ್ಕುಲಪ್ರಸೂತರ ವಿನಾಶ ನೋಡಬೇಕು. ಈ ಎರಡನ್ನೂ ಚಿರಂಜೀವಿಗಳು ಕಾಣುತ್ತಾರೆ. ಮತ್ತು ಅನುಭವಿಸುತ್ತಾರೆ ಎನ್ನುತ್ತಾನೆ. ಅಂದರೆ ಇಲ್ಲಿಯೂ ಸಹ ದೀರ್ಘಾಯುಷ್ಯದ ದುಷ್ಪರಿಣಾಮವನ್ನು ಹೇಳಲಾಗಿದೆ. ಹೀಗೇ ಅನೇಕ ವಿಷಯಗಳನ್ನು ಬಕ ಹೇಳುತ್ತಾನೆ ಸುಖ ಮತ್ತು ದುಃಖಗಳನ್ನು ಹೇಳುತ್ತಾ ಹೋಗುತ್ತಾನೆ.
ಇನ್ನು ಶಾಂತಿಪರ್ವದ ೨೮ನೇ ಅಧ್ಯಾಯದಲ್ಲಿ ’ಅಕಿಞ್ಚನಾಶ್ಚ ದೃಶ್ಯನ್ತೇ ಪುರುಷಾಶ್ಚಿರಜೀವಿನಃ | ಸಮೃದ್ಧೇ ಚ ಕುಲೇ ಜಾತಾ ವಿನಶ್ಯನ್ತಿ ಪತಙ್ಗವತ್’ ಯಾರ ಬಳಿಯಲ್ಲಿ ಏನೂ ಇರುವುದಿಲ್ಲವೋ ಅಂತಹ ದಟ್ಟದರಿದ್ರರು ಚಿರಂಜೀವಿಗಳಾಗಿರುತ್ತಾರೆ. ಆದರೆ ಆಗರ್ಭಶ್ರೀಮಂತರ ವಂಶದಲ್ಲಿಹುಟ್ಟಿದವರು ಪತಂಗದ ಹುಳುಗಳಂತೆ ಬಹಳ ಬೇಗ ಸಾಯುತ್ತಾರೆ. ಸಾಮಾನ್ಯವಾಗಿ ಶ್ರೀಮಂತರಾದವರಿಗೆ ಅನ್ನವನ್ನು ಅರಗಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಒಂದೆರಡು ತುತ್ತುಗಳಿಂದಲೇ ಅವರ ಹೊಟ್ಟೆಯು ತುಂಬಿಹೋಗುತ್ತದೆ. ಆದರೆ ದರಿದ್ರರಲ್ಲಿರುವ ಜಠಾರಾಗ್ನಿಗಳು ಕಟ್ಟಿಗೆಗಳನ್ನಾದರೂ ಸಂಪೂರ್ಣವಾಗಿ ಜೀರ್ಣಿಸಿಬಿಡುತ್ತವೆ. ದರಿದ್ರರಾದವರು ಯಾವ ಪದಾರ್ಥವನ್ನೇ ತಿಂದರೂ ಜೀರ್ಣಿಸಿಕೊಳ್ಳುತ್ತಾರೆ. ಎಷ್ಟು ತಿಂದರೂ ಅವರಿಗೆ ಹೊಟ್ಟೆಯು ತುಂಬುವುದೇ ಇಲ್ಲ. ಆದುದರಿಂದ ಅವರು ಚಿರಂಜೀವಿಗಳು ಎನ್ನುವ ಉಲ್ಲೇಖ ಸಿಗುತ್ತದೆ. ಇಲ್ಲೆಲ್ಲಿಯೂ ಚಿರಂಜೀವತ್ವ ಅಂದರೆ ಶಾಶ್ವತ ಎಂದು ಹೇಳಿಲ್ಲ. ಇನ್ನು ಭಗವದ್ಗೀತೆಯಲ್ಲಿ ಜಾತಸ್ಯಹಿ ಧ್ರವೋ ಮೃತ್ಯುಃ ಎನ್ನುವುದು ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತವೆನ್ನುವುದು ಸಿಗುವಾಗ ಚಿರಂಜೀವಿಯ ಅರ್ಥ ಸ್ಪಷ್ಟವಾಗುತ್ತದೆ.
0 Comments