ವಿಪದಃ ಸಂತು ನಃ ಶಶ್ವತ್ ತತ್ರತತ್ರ ಜಗತ್ಪತೇ ।
ಭವತೋ ದರ್ಶನಂ ಯತ್ ಸ್ಯಾದಪುನರ್ಭವದರ್ಶನಮ್ ॥೨೮॥
ಇಲ್ಲಿ ಕುಂತಿ ಕೃಷ್ಣನಲ್ಲಿ ಕೇಳುವ ಈ ಮಾತು ತುಂಬಾ ವಿಶಿಷ್ಠವಾದುದು. ಆಕೆ ಕೇಳುತ್ತಾಳೆ: “ನನಗೆ ಏನಾದರೂ ಕೊಡುವುದಿದ್ದರೆ ನೀನು ನನ್ನ ಜೀವನದುದ್ದಕ್ಕೂ ಕಷ್ಟವನ್ನು ಕೊಡು” ಎಂದು. ನಾವು ಭಗವಂತನಲ್ಲಿ ‘ಸದಾ ಸುಖವನ್ನು ಕೊಡು’ ಎಂದು ಕೇಳಬಾರದು. ಏಕೆಂದರೆ ಸುಖಪುರುಷರಿಗೆ ಪ್ರಪಂಚ ಜ್ಞಾನವೇ ಇರುವುದಿಲ್ಲ. ಅವರಿಗೆ ಭಗವಂತನ ನೆನಪು ಕೂಡಾ ಇರುವುದಿಲ್ಲ. ಜೀವನದಲ್ಲಿ ಕಷ್ಟ ಬರುವುದು ಎಂದರೆ ಅದು ಜೀವ ಪಕ್ವವಾಗುವ ಕ್ರಿಯೆ. ಅದು ಶಿಕ್ಷೆ ಅಲ್ಲ, ಶಿಕ್ಷಣ. ಹೇಗೆ ಅಕ್ಕಿ ಬೆಂಕಿಯ ಕಾವಿನಲ್ಲಿ ಬೆಂದು ಅನ್ನವಾಗುತ್ತದೋ ಹಾಗೇ ಈ ಜೀವ ಕೂಡಾ. ಅದಕ್ಕೆ ಕಷ್ಟವೆಂಬ ಕಾವು ಕೊಟ್ಟಾಗ ಅದು ಪಕ್ವವಾಗುತ್ತದೆ. ಇಲ್ಲಿ ಕುಂತಿ ಹೇಳುತ್ತಾಳೆ: “ನನಗೆ ಕಷ್ಟವನ್ನೇ ಕೊಡು, ಏಕೆಂದರೆ ನೀನು ಜಗತ್ಪತಿ. ಕಷ್ಟವನ್ನು ಕೊಟ್ಟು ಅದನ್ನು ಎದುರಿಸುವ ಆತ್ಮಸ್ಥೈರ್ಯ ಕೊಡುವವನು ನೀನು. ಜಗತ್ತಿನ ಪಾಲಕನಾದ ನೀನು ಕೊಡುವ ಕಷ್ಟ ನಮಗೆ ರಕ್ಷಣೆ! ಯಾವ ಕಷ್ಟದಿಂದ ನಿನ್ನ ದರ್ಶನ ಸಾಧ್ಯವೋ ಅಂತಹ ಕಷ್ಟಕ್ಕಿಂತ ದೊಡ್ಡ ಭಾಗ್ಯ ಜೀವನದಲ್ಲಿ ಇನ್ನೊಂದಿಲ್ಲ. ನಿನ್ನ ದರ್ಶನ ಸಾಮಾನ್ಯ ವಿಷಯವೇ? ಋಷಿಗಳು ನಿನ್ನನ್ನು ಕಾಣಬೇಕು ಎಂದು ಜನ್ಮ-ಜನ್ಮದಲ್ಲಿ ಪರಿತಪಿಸುತ್ತಾರೆ. ಹಾಗಿರುವಾಗ ಕಷ್ಟಕಾಲದಲ್ಲಿ ಅನಾಯಾಸವಾಗಿ ನಿನ್ನ ದರ್ಶನ ಭಾಗ್ಯ ಸಿಗುವುದರಿಂದ ಸದಾ ನನಗೆ ಕಷ್ಟ ಕೊಡು” ಎಂದು ಕೇಳುತ್ತಾಳೆ. ಭಗವಂತನ ದರ್ಶನ ಸಾಮಾನ್ಯ ಸಂಗತಿಯೇ? ಆತನ ದರ್ಶನ “ಅಪುನರ್ಭವದರ್ಶನ”. ‘ಪುನರ್ಭವ’ ಎಂದರೆ ಮತ್ತೆಮತ್ತೆ ಹುಟ್ಟುವುದು. ಆದ್ದರಿಂದ ಅಪುನರ್ಭವದರ್ಶನ ಎಂದರೆ ಮರುಹುಟ್ಟಿಲ್ಲದ ಮೋಕ್ಷವನ್ನು ಕೊಡುವ ದರ್ಶನ. ಇಂತಹ ಮಹಾನ್ ದರ್ಶನ ಅತ್ಯಂತ ಕ್ಲಿಷ್ಟ. ಆದರೆ ಆಪತ್ತಿನಲ್ಲಿ ಭಗವಂತನ ದರ್ಶನ ಅನಾಯಾಸವಾಗಿರುವುದರಿಂದ “ನನಗೆ ಕಷ್ಟವನ್ನೇ ಕೊಡು” ಎಂದು ಕುಂತಿ ಕೃಷ್ಣನಲ್ಲಿ ಕೇಳುತ್ತಾಳೆ.
ಜನ್ಮೈಶ್ವರ್ಯಶ್ರುತಶ್ರೀಭಿರೇಧಮಾನಮದಃ ಪುಮಾನ್ ।
ನಾರ್ಹ ಇತ್ಯಭಿಧಾತುಂ ವೈ ತ್ವಾಮಕಿಂಚನಗೋಚರಮ್ ॥೨೯॥
ಇಂದು ನಾವು ನಮ್ಮನ್ನು ಐದು ಮದಗಳಿಂದ ಹೊದ್ದುಕೊಂಡು ಬದುಕುತ್ತಿದ್ದೇವೆ. ಅವುಗಳೆಂದರೆ ೧. ಕುಲದ ಮದ, ೨. ಐಶ್ವರ್ಯ ಮದ, ೩. ವಿದ್ಯೆಯ ಮದ, ೪.ಧನ ಮದ.
ನಮ್ಮ ಮನೆತನ, ಪರಂಪರೆ, ಅದರ ಬಗ್ಗೆ ಹೆಗ್ಗಳಿಕೆ, ಇವು ಅಹಂಕಾರವಾಗಿ ಬೆಳೆದಾಗ ಅದು ನಮ್ಮನ್ನು ದೇವರಿಂದ ದೂರ ಮಾಡಿಸುತ್ತದೆ. ಅದೇ ರೀತಿ: ಅಧಿಕಾರದ ಮದ, ನನ್ನಂತಹ ವಿದ್ವಾಂಸ ಯಾರಿದ್ದಾರೆ ಎನ್ನುವ ವಿದ್ಯೆಯ ಮದ, ಸಂಪತ್ತಿನ ಮದ-ಇವು ಅಹಂಕಾರವಾಗಿ ಯಾರನ್ನು ಕಾಡುತ್ತದೋ “ಅಂತವನ ಬಾಯಿಯಲ್ಲಿ ಭಗವಂತನ ಹೆಸರೇ ಬಾರದು” ಎನ್ನುತ್ತಾಳೆ ಕುಂತಿ. ಈ ಮದದ ಹೊದಿಕೆಯನ್ನು ಕಳಚಿ ಹೊರಬಂದಾಗ ಮಾತ್ರ ಭಗವಂತನ ದರ್ಶನ ಸಾಧ್ಯ.
ಅಹಂಕಾರಶೂನ್ಯನಾಗಿ ಪೂರ್ಣ ಶರಣಾಗತಿಯಾಗುವುದೊಂದೇ ಭಗವಂತನ ಅನುಗ್ರಹಕ್ಕೆ ದಾರಿ. ನಮ್ಮ ಯಾವ ಮದವೂ ನಮ್ಮನ್ನು ಭಗವಂತನತ್ತ ಒಯ್ಯುವುದಿಲ್ಲ. ಹಾಗಾಗಿ ಮೊತ್ತಮೊದಲು ನಾವು ಈ ಮದದಿಂದ ಕಳಚಿಕೊಳ್ಳಬೇಕು. ಇಲ್ಲಿ ಕುಂತಿ ಹೇಳುತ್ತಾಳೆ: “ನೀನು ಅ-ಕಿಂಚನ” ಎಂದು. ಅಂದರೆ ಕಷ್ಟದಲ್ಲಿರುವವರಿಗೆ ಗೋಚರನಾಗುವವ ಎಂದರ್ಥ. ಇದರರ್ಥ ಶ್ರೀಮಂತರಿಗೆ ಭಗವಂತ ಗೋಚರನಾಗುವುದಿಲ್ಲ ಎಂದರ್ಥವಲ್ಲ. ಶ್ರೀಮಂತಿಕೆ ಇದ್ದು ಶರಣಾಗಿತಿ ಇದ್ದಾಗ ಕೂಡಾ ಭಗವಂತ ಗೋಚರನಾಗುತ್ತಾನೆ. ನಮಗೆ ಅ-ಕಾರವಾಚ್ಯ ಭಗವಂತನೇ ಸರ್ವಸ್ವವಾದಾಗ ಆತ ಗೋಚರನಾಗುತ್ತಾನೆ.
ವೇದದಲ್ಲಿ ಹೇಳಿದ ಮಾತನ್ನೇ ಇಲ್ಲಿ ಕುಂತಿ ಹೇಳಿರುವುದು. ಕಠೋಪನಿಷತ್ತಿನಲ್ಲಿ ಹೇಳುವಂತೆ: “ನ ಸಾಂಪರಾಯಃ ಪ್ರತಿಭಾತಿ ಬಾಲಂ ಪ್ರಮಾದ್ಯಂತಂ ವಿತ್ತಮೋಹೇನ ಮೂಢಮ್ । [೧-೨-೬]. ಇಲ್ಲಿ ಹೇಳುವಂತೆ: ವಿತ್ತದ ಮೋಹದಿಂದ ಮೂಢರಾಗಿರುವವರ ಬಳಿ ಭಗವಂತ ಸುಳಿಯುವುದಿಲ್ಲ. ಇದನ್ನೇ ಬೈಬಲ್ ನಲ್ಲಿ ಹೀಗೆ ಹೇಳಿದ್ದಾರೆ: “Blessed are you who are poor, for yours is the kingdom of God” “It is easier for a Camel to go through the eye of a needle than for a rich person to enter the Kingdom of God".
ಓಂ ದೇವಕೀನಂದನಾಯ ನಮಃ
ಓಂ ನಮೋ ನಾರಾಯಣಾಯ
ಓಂ ನಮೋ ಭಗವತೇ ವಾಸುದೇವಾಯ ನಮಃ
0 Comments