ಶ್ರೀರಾಮಾಯ ನಮ;.ರಾಮನ ಚರಿತ್ರೆ ಅತ್ಯಂತ ಶುದ್ಧವಾದದ್ದು.ಆದರೆ ಅವನ ಕೆಲವು ನಡೆಗಳು ಮುಗ್ಧಜನರಿಗೆ ಗೊಂದಲವುಂಟುಮಾಡಿದ್ದರೆ,ಕೆಲವು ಬುದ್ಧಿಜೀವಿಗಳಿಗೆ ಪ್ರಬಲ ಅಸ್ತ್ರಗಳೂ ಆಗಿವೆ.
ಸೀತೆಗೆ ಅಗ್ನಿಪರೀಕ್ಷೆ - ರಾವಣ ಸೀತೆಯನ್ನು ಅಪಹರಿಸುವ ಮುಂಚೆ ನಿಜವಾದ ಸೀತೆಯನ್ನು ಅಗ್ನಿಯು ಕರೆದುಕೊಂಡು ಹೋಗಿ ಕೈಲಾಸದಲ್ಲಿಟ್ಟನು.ಶಿವಪಾರ್ವತಿಯರಿಂದ ಅರ್ಚಿತಳಾದಳು.ಇಂದ್ರ ಸೀತೆಯ ವೇಷವನ್ನು ಧರಿಸಿದನು.ಸೀತೆ ಒಂದಂಶದಿಂದ ಸೀತಾಕೃತಿಯಲ್ಲೂ ನೆಲೆಸಿದಳು.ರಾವಣ ಸೀತಾಕೃತಿಯನ್ನು ಅಪಹರಿಸಿದನು.ರಾಮನ ಅಪ್ಪಣೆಯಿಂದಲೇ ಈ ಘಟನೆ ನಡೆದಿತ್ತು.ಮುಂದೆ ಅಗ್ನಿಪ್ರವೇಶ ನಡೆದಾಗ ಸೀತಾಕೃತಿ ಅಗ್ನಿಪ್ರವೇಶ ಮಾಡಿ ಇಂದ್ರನಾಗಿ ಅದೃಶ್ಯರೂಪದಿಂದ ದೇವಲೋಕಕ್ಕೆ ಹೋಯಿತು.ನಿಜವಾದ ಸೀತೆಯನ್ನು ಕೈಲಾಸದಿಂದ ಕರೆತಂದ ಅಗ್ನಿ ಬೆಂಕಿಯ ರಾಶಿಯಲ್ಲಿ ತೋರಿಸಿದನು.ಸೀತೆ ಪವಿತ್ರಳೆಂದು ಅಗ್ನಿ ಘೋಷಿಸಿದನು.ಸಾಮಾನ್ಯಜನರಿಗೆ ರಾಮ ಸೀತೆಯನ್ನು ಸಂಶಯಿಸಿದಂತೆ ಕಂಡಿತು.ಬುದ್ಧಿಜೀವಿಗಳಿಗೆ ಮೊದಲ ಅಸ್ತ್ರ ಬತ್ತಳಿಕೆಗೆ ಸೇರಿತು.
ಸೀತಾಪರಿತ್ಯಾಗ - ಸುರಾಣಕರೆಂಬ ದೈತ್ಯರು ಮಾಡಬಾರದ ಕಾರ್ಯಗಳನ್ನು ಮಾಡಿ ನರಕ ತಪ್ಪಬೇಕೆಂದು ಬ್ರಹ್ಮನಲ್ಲಿ ಕೇಳಿದರು. ಲಕ್ಷ್ಮೀ ಮತ್ತು ಹರಿಯ ನಡುವೆ ವಿಯೋಗ ಉಂಟುಮಾಡುವ ಕಾರ್ಯ ನಿಮ್ಮಿಂದ ನಡೆಯದಿದ್ದರೆ ನಿಮಗೆ ನರಕವಿಲ್ಲ ಎಂದನು.ಆ ಸುರಾಣಕರು ಅಯೋಧ್ಯೆಯ ಪ್ರಜೆಗಳಾಗಿ ಹುಟ್ಟಿದರು. ಸೀತೆಯ ಬಗ್ಗೆ ಅಪಪ್ರಚಾರ ಮಾಡಿದರು.ಅದನ್ನೇ ನೆಪ ಮಾಡಿಕೊಂಡು ಸೀತೆಯನ್ನು ತ್ಯಜಿಸಿದರೆ ಸುರಾಣಕರನ್ನು ನರಕಕ್ಕೆ ತಳ್ಳಬಹುದೆಂದು ಸ್ವಾಮಿಯು ಬಯಸಿದನು.ಸೀತಾಪರಿತ್ಯಾಗವಾಯಿತು ಸುರಾಣಕರು ನರಕ ಸೇರಿದರು.ವಾಲ್ಮೀಕಿಮುನಿಯ ಆಶ್ರಮದ ಬಳಿ ಬಿಟ್ಟು ಬಾ ಎಂದು ಲಕ್ಷ್ಮಣನಿಗೆ ಹೇಳಿದ ಹೊರತು ಕಾಡುಪಾಲು ಮಾಡಲಿಲ್ಲ.
ಸುರಾಣಕರ ಅಪಪ್ರಚಾರವನ್ನು ಕೆಲವು ಸಜ್ಜನರೂ ನಂಬಿ ಇಲ್ಲಸಲ್ಲದ್ದನ್ನು ಮಾತಾಡತೊಡಗಿದರು.ಇದರಿಂದ ಅವರಿಗೂ ನರಕವಾಗುವ ಅಪಾಯವಿತ್ತು.ಅದನ್ನು ತಪ್ಪಿಸಲು ಸ್ವಾಮಿಯು ಸಂಕಲ್ಪಿಸಿದನು.ಮುಂದೆ ಸೀತಾಸಮಾಗಮ ಆದಾಗ ಮತ್ತೊಮ್ಮೆ ಅಗ್ನಿಪ್ರವೇಶ ಮಾಡಲು ಹೇಳಿದನು.ಆಗ ಸೀತೆಯು ಹಾಗೆ ಮಾಡದೆ ತಾನು ಪತಿವ್ರತೆಯಾದರೆ ಭೂಮಿಯು ಬಾಯ್ಬಿರಿದು ನನ್ನನ್ನು ಸೇರಿಸಿಕೊಳ್ಳಲಿ ಎಂದಳು.ಹಾಗೇ ನಡೆಯಿತು.ಅಯೋಧ್ಯೆಯ ಸಜ್ಜನರು ಪಶ್ಚಾತ್ತಾಪದಿಂದ ಬೆಂದು ಹೋದರು.ಎದೆ ಬಡಿದುಕೊಂಡು ಅತ್ತರು.ಪಾಪ ಪರಿಹಾರವಾಯಿತು ನರಕ ತಪ್ಪಿತು.ಆದರೆ ಸೀತಾಪರಿತ್ಯಾಗ ಬುದ್ಧಿಜೀವಿಗಳಿಗೆ ಮತ್ತೊಂದು ಅಸ್ತ್ರವಾಯಿತು.
ಶಂಬೂಕವಧೆ - ಇಂದ್ರಾದಿದೇವತೆಗಳನ್ನು ಆಳುವ ರುದ್ರಪದವಿ ದೊರಕಿ ಪಾರ್ವತೀದೇವಿ ತನ್ನ ವಶವಾಗಬೇಕೆಂದು ಬಯಸಿ ತಪಸ್ಸು ಮಾಡಿದ.ಅವನ ತಪಸ್ಸಿನಿಂದ ಲೋಕದಲ್ಲಿ ದುರ್ಘಟನೆ ನಡೆಯಿತು.ಅವನು ದುಷ್ಟನಾಗಿದ್ದರಿಂದ ಅವನನ್ನು ಕೊಂದನೇ ಹೊರತು ಶೂದ್ರನೆಂದು ಅಲ್ಲ.ಶೂದ್ರಳಾದ ಶಬರಿ ತಪಸ್ಸು ಮಾಡಿದಾಗ ಅವಳನ್ನು ಕೊಲ್ಲಲಿಲ್ಲ.ಶೂದ್ರನಾದ ಗುಹನನ್ನು ಅನುಗ್ರಹಿಸಿದ.ಬ್ರಾಹ್ಮಣರಾದ ರಾವಣ ಕುಂಭಕರ್ಣರನ್ನು ಕೊಂದ.ಹೀಗೆ ಜಾತಿ ಆಧಾರದಲ್ಲಿ ರಾಮ ವ್ಯವಹರಿಸಲಿಲ್ಲ.ಗುಣದ ಆಧಾರದಲ್ಲಿ ವ್ಯವಹರಿಸಿದ.ಆದರೆ ಬುದ್ಧಿಜೀವಿಗಳ ಬತ್ತಳಿಕೆಗೆ ಶಂಬೂಕವಧೆ ಮೂರನೇ ಅಸ್ತ್ರವಾಯಿತು.
ದುಷ್ಟನಾಶಕನಾದ ಶಿಷ್ಟರಕ್ಷಕನಾದ ಹನುಮಂತನ ಸ್ವಾಮಿಯಾದ
ಶ್ರೀಸೀತಾರಾಮಚಂದ್ರನನ್ನು ಭಕ್ತಿಯಿಂದ ಸ್ಮರಿಸಿದರೆ ಮಹಾಪಾಪಗಳೂ ಪರಿಹಾರವಾಗುತ್ತವೆ.ಸ್ವಾಮಿಯು ನಮಗೆಲ್ಲಾ ಒಳ್ಳೆಯದನ್ನೇ ಮಾಡಲಿ.
0 Comments