Header Ads Widget

ॐ GSB Madhva Bhramins ॐ

ಪ್ರಿಯವ್ರತ ಚರಿತ್ರೆ

 


ಪ್ರಿಯವ್ರತ ಚರಿತ್ರೆ

ಇಲ್ಲಿವರೆಗೂ ಮನುವಿನ ಪ್ರಥಮ ಪುತ್ರ ಉತ್ತಾನಪಾದನ ವಂಶದ ಬಗ್ಗೆ ತಿಳಿದುಕೊಂಡಿದ್ದೇವೆ ಈಗ ಮನುವಿನ ದ್ವಿತೀಯ ಪುತ್ರ ಪ್ರಿಯವ್ರತನ ವಂಶದ ಬಗ್ಗೆ ತಿಳಿದುಕೊಳ್ಳೋಣ.

ಪರೀಕ್ಷಿತರಾಜನು ಕೇಳುತ್ತಾನೆ ಮನು ಪುತ್ರ ಪ್ರಿಯವ್ರತ ರಾಜನು ಜ್ಞಾನಿಯೂ, ಪರಮ ಭಗವದ್ ಭಕ್ತ ನಾಗಿದ್ದು,  ಗೃಹಸ್ಥಾಶ್ರಮ ವನ್ನೇಕೆ ಸ್ವೀಕರಸಿದನು?. ಸಂಸಾರ ದಿಂದ ಸ್ವರೂಪದ  ವಿಸ್ಮೃತಿ ಮತ್ತು ಆತ್ಮಕ್ಕೆ ಬಂಧನವಾಗುವುದಿಲ್ಲವೇ? ಪರಮಾತ್ಮನ ಕಮಲ ಚರಣಗಳಲ್ಲಿ ಮನಸ್ಸು ಸ್ಥಿರವಾಗವುದಿಲ್ಲ ಎಂದು  ಮಹಾತ್ಮನು ಕುಟುಂಬದ ಜಂಜಾಟದಲ್ಲಿ ತೊಡಗಬಾರದಲ್ಲವೇ?.  ಸ್ತ್ರೀ ಪುತ್ರಾದಿಗಳಲ್ಲಿ ಅನುರಕ್ತನಾಗಿಯೂ  ಪ್ರಿಯವ್ರತನಿಗೆ ಭಯವಂತನ ನಿಶ್ಚಿತಮತಿಯಾಗಿ ಮೋಕ್ಷವು ಹೇಗಾಯಿತು ಎಂದು ಪರೀಕ್ಷಿತನು ಪ್ರಶ್ನಿಸುತ್ತಾನೆ.

ಪರೀಕ್ಷಿತನ ಪ್ರಶ್ನೆಗೆ ಶುಕಾಚಾರ್ಯರು ಉತ್ತರ  ನೀಡುತ್ತಾರೆ.

ಯಾರ ಮನವು ಪರಮಾತ್ಮನ ಚರಣ ಕಮಲಗಳಲ್ಲಿ ರಮಣವಾಗಿರುತ್ತದೆಯೋ ಅಂಥವರ ಮಾರ್ಗದಲ್ಲಿ ವಿಘ್ನಗಳು ಬಂದರೂ ಅವರು ಕಲ್ಯಾಣಕಾರಕ ಮಾರ್ಗ ಬಿಡುವುದಿಲ್ಲ. ಪ್ರಿಯವ್ರತನ ಸ್ಥಿತಿಯು ಹಾಗೆಯೇ ಆಯಿತು. ನಾರದರ ಕೃಪೆಯಿಂದ  ಅವನಿಗೆ ಆತ್ಮ ಜ್ಞಾನದ ಮಾರ್ಗ ದೊರೆಯಿತು. ಅದರಂತೆ ಅವನು ಜೀವನದುದ್ದಕ್ಕೂ ಆ ಜ್ಞಾನ ವನ್ನೇ  ಉಪಾರ್ಜಿಸುವ  ಸಂಕಲ್ಪ ಮಾಡಿದನು.

ಪ್ರಿಯವ್ರತನ ತಂದೆ ರಾಜ್ಯಾಭಾರ ಒಪ್ಪಿಸಲು ಸಿದ್ಧನಾದನು ಆದರೆ ಪ್ರಿಯವ್ರತನಿಗೆ  ಅದರ ಇಚ್ಛೆ ಇರಲಿಲ್ಲ. ಅವನ ಚಿತ್ತವು ಪರಮಾತ್ಮನಲ್ಲಿತ್ತು. ರಾಜ್ಯಾಭಾರವು ಆತ್ಮಕ್ಕೆ ಬಂಧನವಾಗುವುದು ಎಂದು ವಿಚಾರಿಸಿ ತಂದೆಯ ಆಜ್ಞೆ ಸ್ವೀಕರಿಸಲಿಲ್ಲ. ಸೃಷ್ಟಿ ವೃದ್ದಿಯ ಚಿಂತನೆಯಲ್ಲಿದ್ದ ಬ್ರಹ್ಮನು ಇದನ್ನು ತಿಳಿದು ಅಲ್ಲಿಗೆ ಬಂದನು. ಅಷ್ಟೊತ್ತಿಗೆ ನಾರದರು ಪ್ರಿಯವ್ರತನಿಗೆ  ಆತ್ಮೋಪದೇಶ ಮಾಡುತಿದ್ದರು. ಆಗ ಮನುರಾಜನೂ ಮಗನನ್ನು ಕರೆಯಲು ಅಲ್ಲಿಗೆ ಬಂದನು.  ಬ್ರಹ್ಮನು ಬಂದಿರುವುದನ್ನು ಕಂಡು  ಮನು ಮತ್ತು ಪ್ರಿಯವ್ರತರು ಎದ್ದು ನಿಂತು ಕೈ ಮುಗಿದರು. ಆಗ ಬ್ರಹ್ಮನು ಪ್ರಿಯವ್ರತನಿಗೆ ಹೇಳುತ್ತಾನೆ.  ನಾನು ಪರಮಾತ್ಮನ ಪ್ರೇರಣೆಯಿಂದ ನಿನಗೆ‌ ಸತ್ಯವನ್ನು ಹೇಳುತ್ತೇನೆ ಕೇಳು. ಪರಮಾತ್ಮನ ಸಂಕಲ್ಪಾನುಸಾರ ಪ್ರತಿಯೊಬ್ಬರು ಪ್ರಾರಬ್ದ ಕರ್ಮಾನುಸಾರ ಸುಖ,ದು:ಖ ಭೋಗಿಸಲೇಬೇಕು. ಜಿತೇಂದ್ರಿಯನಿಗೆ ಗೃಹಸ್ಥಾಶ್ರಮದಿಂದ ಯಾವ ಬಾಧೆ ತಟ್ಟಲಾರದು. ಕಾಮಾದಿಗಳನ್ನು ಗೆಲ್ಲದೇ ಸನ್ಯಾಸಿಯಾದರೂ ಸಂಸಾರ ಭಯ ತಪ್ಪುವುದಿಲ್ಲ. ವಿಷಯೀ ಪುರುಷನಿಗೆ ವನದಲ್ಲಿಯೂ ಕಾಮಾದಿ ಶತ್ರುಗಳು ಬಾಧಿಸುತ್ತವೆ. ಜಿತೇಂದ್ರಿಯನು ಮನೆಯಲ್ಲಿದ್ದರೂ ಕಾಮಾದಿಗಳನ್ನು ನಿಗ್ರಹಿಸಿ ತಪವನ್ನು ಆಚರಿಸಬಹುದು. ಯಾರಿಗೆ ವಿಷಯದಾಶೆ ಇರುವುದಿಲ್ಲವೋ ಮತ್ತು ವೈರಾಗ್ಯವು ಜಾಗೃತವಾಗಿರುವುದೋ ಅಂಥವರಿಗೆ ಮನೆಯೇ ತಪೋವನವಾಗುತ್ತದೆ.

ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹ ಎಂಬ ಆರು ಶತ್ರುಗಳನ್ನು  ಗೆಲ್ಲಬೇಕೆಂದು ಅಪೇಕ್ಷಿಸುವ ವರು ಗೃಹಸ್ಥಾಶ್ರಮವೆಂಬ ಕೋಟೆಯನ್ನು ಆಶ್ರಯಿಸಿ ಸಾವಕಾಶವಾಗಿ ಆರು ಶತ್ರುಗಳನ್ನು ಗೆಲ್ಲಬೇಕು. ಅವು ಕ್ಷೀಣವಾದ ಮೇಲೆ ಮನೆಯಲ್ಲಿ ಅಥವಾ ವನದಲ್ಲಿ ಸಾಧನೆ ಮಾಡಬಹುದು.

ರಾಜನು ಹೇಗೆ ಕೋಟೆಯನ್ನಾಶ್ರಯಿಸಿ ಯುದ್ಧದಲ್ಲಿ ಶತ್ರುಗಳನ್ನು ಗೆದ್ದನಂತರ ನಿರ್ಭಯನಾಗಿ ಸಂಚರಿಸುವಂತೆ ನೀನು ಪರಮಾತ್ಮನ ಚರಣರೂಪಿ ಎಂಬ ಕೋಟೆಯನ್ನು ಆಶ್ರಯಿಸಿ ಆರು ಶತ್ರುಗಳನ್ನು ಗೆದ್ದು  ನಿನ್ನ ಪ್ರಾರಬ್ದಾನುಸಾರ  ಪರಮಾತ್ಮನು ನೀಡಿದ ಸುಖವನ್ನು ಭೋಗಿಸು. ನಂತರ ಸರ್ವಸಂಗ ತ್ಯಜಿಸಿ ಪರಮಾತ್ಮನ್ನು  ಚಿಂತಿಸು ಎಂದು ಬ್ರಹ್ಮನು ಉಪದೇಶ ನೀಡಿದ.

ಸಂಸಾರದಲ್ಲಿದ್ದು ಕೊಂಡೆ ಪಾರಾಮಾರ್ಥ ಗೆಲ್ಲಬೇಕು ಎಂಬ ಸಂದೇಶ ಭಾಗವತವು ನೀಡಿದೆ.

ಶಾಮಸುಂದರ, ಕುಲಕರ್ಣಿ, ಕಲ್ಬುರ್ಗಿ {9886465925}

Post a Comment

0 Comments