ಕೃಷ್ಣಾಜಿನ ಅಂದರೆ ಜಿಂಕೆಯ ಚರ್ಮ , ವ್ಯಾಘ್ರಾಜಿನ ಅಂದರೆ ಹುಲಿಯ ಚರ್ಮ ಇದರ ಬಳಕೆ ಹೆಚ್ಚಾಗಿ ಧ್ಯಾನಕ್ಕಾಗಿ ಕುಳಿತುಕೊಳ್ಳುವಾಗ ಬಳಸಲ್ಪಡುತ್ತದೆ. ಈ ಜಿಂಕೆಯ ಚರ್ಮದ ವಿಶೇಷತೆ ಎಂದರೆ ಇದರ ಮೇಲೆ ಕುಳಿತು ಧ್ಯಾನದಲ್ಲಿ ತೊಡಗಿದಾಗ ಅದು ನಮ್ಮ ಮನಸ್ಸನ್ನು ಧ್ಯಾನದಲ್ಲಿ ಕೇಂದ್ರೀಕರಿಸುವಂತೆ ಮಾಡುತ್ತದೆ. ಒಮ್ಮೆ ಅದರಿಂದೆದ್ದು ಬಂದಾಗ ಮತ್ತೆ ಸಾಂಸಾರಿಕ ಜೀವನಕ್ಕೆ ಮರಳುವಂತೆ ಮನದ ಮೇಲೆ ತನ್ನ ಪ್ರಭಾವವನ್ನ ಬಿಟ್ಟು ಕೊಡುತ್ತದೆ. ಅದೇ ವ್ಯಾಘ್ರಾಜಿನ ಹಾಗಲ್ಲ ,ಒಮ್ಮೆ ಅದರ ಮೇಲೆ ಕುಳಿತು ಧ್ಯಾನಾಸಕ್ತರಾದರೆ ನಿಮ್ಮ ಮನಸ್ಸಿನಲ್ಲಿ ವೈರಾಗ್ಯ ಭಾವವನ್ನ ಬಿತ್ತಿ ಬಿಡುತ್ತದೆ. ಹಾಗಾಗಿ ಹೆಚ್ಚಾಗಿ ಸ್ವಾಮೀಜಿಯವರು ವ್ಯಾಘ್ರಾಜಿನದ ಮೇಲೆ ಕುಳಿತಿರುತ್ತಾರೆ.... ಆದರೆ ಈ ರೀತಿ ಕುಳಿತಿರುವಾಗ ನಾವು ಪೂರ್ತಿ ಅದರ ಮೇಲೆಯೇ ಕುಳಿತಿದ್ದೇವೆಯೋ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು...ಕಾಲು ನೆಲಕ್ಕೇನಾದರೂ ತಾಗಿದ್ದಲ್ಲಿ ಇದರ ಪೂರ್ಣ ಪ್ರಮಾಣದ ಲಾಭ ಸಿಗಲಾರದು.
ಸಂಧ್ಯಾವಂದನೆಯಲ್ಲಿ ಮಾಡಲೇಬೇಕಾದ ಪ್ರಮುಖವಾದ ಭಾಗ "ಗಾಯತ್ರೀ ಜಪ."
ಗಾಯತ್ರೀಯೆಂದೊಡನೆ ಕೆಲವರಿಗೆ ನೆನಪಾಗುವುದು ಪಂಚ ಮುಖವುಳ್ಳ ಸ್ತ್ರೀ ರೂಪ. ಆದರೆ ಹಾಗಲ್ಲ. ಗಾಯತ್ರೀಯೆಂದರೆ ಭಗವಂತನ ಒಂದು ರೂಪ. ನಾವು ಗಾಯತ್ರೀಯನ್ನು ಹೀಗೆ ಧ್ಯಾನಿಸಬೇಕು. ಸೂರ್ಯಮಂಡಲದಲ್ಲಿರುವ ಗಾಯತ್ರೀಮಂತ್ರಪ್ರತಿಪಾದ್ಯನಾದ ಶ್ರೀಮನ್ನಾರಾಯಣನನ್ನು "ಧ್ಯೇಯಃ ಸದಾ" ಎಂಬ ಮಂತ್ರದಿಂದ ಧ್ಯಾನಿಸಿ ಒಂದು ಸಾವಿರ ಅಥವಾ ನೂರು ಅಥವಾ ಕನಿಷ್ಠ ಹತ್ತು ಗಾಯತ್ರೀಯನ್ನು ಜಪಿಸಬೇಕು.
ಸೂರ್ಯೋದಯವಾಗುವ ತನಕ ನಿಂತೇ ಗಾಯತ್ರೀಮಂತ್ರವನ್ನು ಜಪಿಸಬೇಕು. ಅನಂತರ ಕುಳಿತುಕೊಳ್ಳಬಹುದು. ಪ್ರಾತಃ ಸಂಧ್ಯಾವಂದನೆಯನ್ನು
ನಕ್ಷತ್ರಗಳಿರುವಾಗಲೂ, ಸಾಯಂ ಸಂಧ್ಯಾವಂದನೆಯನ್ನು ಸೂರ್ಯನಿರುವಾಗಲೇ ಮಾಡುವುದು ಶ್ರೇಷ್ಢ. ಸಾಯಂ ಸಂಧ್ಯೆಯನ್ನು ಕುಳಿತು ನಡೆಸಬೇಕು.
ಧ್ಯಾನ:
ಶ್ರೀಮನ್ನಾರಾಯಣನು ಸೂರ್ಯಮಂಡಲದಲ್ಲಿ ಪದ್ಮಾಸನಾಸೀನನಾಗಿದ್ದಾನೆ. ತೋಳಲ್ಲಿ ವಂಕಿ, ಕಿವಿಯಲ್ಲಿ ಮಕರ-ಕುಂಡಲ, ಶಿರಸ್ಸಿನಲ್ಲಿ ಕರೀಟ, ಕತ್ತಿನಲ್ಲಿ ಮುತ್ತಿನ ಹಾರಗಳನ್ನು ಧರಿಸಿದ್ದಾನೆ. ಬಂಗಾರದ ಮೈಬಣ್ಣ, ಎರಡು ಕೈಗಳಿಂದ ಶಂಖ-ಚಕ್ರಗಳನ್ನು ಧರಿಸಿದ್ದಾನೆ. ಇಂತಹ ನಾರಾಯಣನನ್ನು ಮನದಲ್ಲಿ ಧ್ಯಾನಿಸಬೇಕು. ಇಂತಹ ಗಾಯತ್ರೀಯನ್ನು ದ್ವಿಜನಾದವನು ಮೂರು ಕಾಲದಲ್ಲಿ ಮಾಡಲೇಬೇಕು. ಇದು ಅವನ ಕರ್ತವ್ಯ.
"...ಸಂಧ್ಯಾತ್ರಯಂ ತು ಕರ್ತವ್ಯಂ ದ್ವಿಜೇನಾತ್ಮವಿದಾ ಸದಾ..."
ಸಂಧ್ಯಾವಂದನೆ, ಜಪ, ಪಾರಾಯಣ ಇವುಗಳನ್ನು ಆಸನದಲ್ಲಿ ಕುಳಿತು ಮಾಡುವುದು ಪ್ರಶಸ್ತ. ಹೇಗೆ ಆಸನದಲ್ಲಿ ವೈವಿಧ್ಯತೆ ಇರುತ್ತದೆಯೋ ಹಾಗೆಯೇ ಫಲದಲ್ಲಿಯೂ ಕೂಡ ವೈವಿಧ್ಯತೆ ಇದೆ. ಧರ್ಮ-ಶಾಸ್ತ್ರದಲ್ಲಿ ಹೇಳುವಂತೆ ಆಸನದ ನಿಯಮಗಳು:
ಶ್ಲೋಕ:
ವಂಶಾಸನೇ ದರಿದ್ರಸ್ಯಾತ್ ಪಾಷಾಣೇ ವ್ಯಾಧಿಸಂಭವಃ
ಧರಣ್ಯಾಂ ದುಃಖಮಾಪ್ನೋತಿ ದೌರ್ಭಾಗ್ಯಂ ದಾರುಕಾಸನೇ ||
ತೃಣಾಸನೆ ಯಶೋಹೀನಃ ಪಲ್ಲವೇ ಚಿತ್ತವಿಭ್ರಮಃ |
ಕುಶಾಸನೇ ಸರ್ವಸಿದ್ಧಿಃ ಕಂಭಲೇ ದುಃಖಮೇವ ಚ
ಕೃಷ್ಣಾಜಿನೇ ಜ್ಞಾನಸಿದ್ಧಿಃ ಮೋಕ್ಷಸ್ಯಾತ್ ವ್ಯಾಘ್ರಚರ್ಮಣೀ
ಬಿದಿರಿನ ಆಸನದಲ್ಲಿ ಕುಳಿತು ಸಂಧ್ಯಾವಂದನೆ ಜಪಾದಿಗಳನ್ನು ಮಾಡಿದರೆ ದಾರಿದ್ರವು ಉಂಟಾಗುತ್ತದೆ. ಕಲ್ಲಿನ ಆಸನ ವ್ಯಾಧಿಗೆ ಕಾರಣ. ಕೇವಲ ನೆಲದಲ್ಲಿ ಕುಳಿತು ಮಾಡಿದರೆ ದುಃಖವನ್ನು ಹೊಂದುತ್ತಾನೆ. ಮಣೆಯ ಆಸನ, ಅಂದರೆ ಹಸೆಮಣೆ ಮೇಲೆ ಕುಳಿತು ಮಾಡಿದರೆ ದೌರ್ಭಾಗ್ಯವನ್ನು [ ಮಣೆಯ ಮೇಲೆ ಕುಳಿತು ಮಾಡುವುದಾದರೆ ಒಂದು ನಾಣ್ಯವನ್ನು ಮಣೆಯ ಮೇಲೆ ಹೊಡೆಸಿರಬೇಕು ], ಇನ್ನು ಹುಲ್ಲಿನ ಆಸನ ಯಶಸ್ಸು ಹಾನಿ. ಹಾಗೆಯೇ ಎಲೆ, ಪಲ್ಲವಾದಿಗಳ ಮೇಲೆ ಕುಳಿತು ಮಾಡುವುದರಿಂದ ಬುದ್ಧಿ-ಭ್ರಮಣೆ.
ಹಾಗಾದರೆ ಶ್ರೇಷ್ಠ ಆಸನಗಳೆಂದರೆ: ದರ್ಭಾಸನ ಸರ್ವಸಿದ್ಧಿಪ್ರದಾಯಕವಾಗಿದೆ. ಹಾಗೆಯೇ ಕೃಷ್ಣಾಜಿನ ಆಸನ ಜ್ಞಾನಕ್ಕೆ ಹೇತುವಾಗಿದೆ. ಇನ್ನು ವ್ಯಾಘ್ರಾಸನ ಮೋಕ್ಷವನ್ನು ಕರುಣಿಸುವುದು.
ಗಾಯತ್ರೀ ಜಪವನ್ನು ಕೂಡ ಮನೆಯಲ್ಲಿ ಮಾಡುವುದಕ್ಕಿಂತ ಗೋಶಾಲೆಯಲ್ಲಿ ಮಾಡುವುದರಿಂದ ಹೆಚ್ಚು ಫಲ. ನದಿ-ತೀರ್ಥಗಳ ಸನ್ನಿಧಿಯಲ್ಲಿ ಮಾಡುವುದರಿಂದ ಸಾವಿರಾರು ಪಾಲು ಪುಣ್ಯ. ಶಾಲಗ್ರಾಮದ ಎದುರು ಮಾಡುವುದರಿಂದ ಅನಂತ ಫಲ.
ಈ ಸಂಧ್ಯಾವಂದನೆಯನ್ನು
ಮೂರು ದಿನ ಯಾವನು ಮಾಡುವುದಿಲ್ಲವೋ ಅವನು ಬ್ರಾಹ್ಮಣ್ಯದಿಂದ ಪತಿತನಾಗುವನು. ಮತ್ತೆ ಗಾಯತ್ರ್ಯಾದಿ ಯಾವುದೇ ಮಂತ್ರ ಜಪಿಸಬೇಕಾದರೆ ಮತ್ತೊಮ್ಮೆ ಉಪನಯನ ಮಾಡಬೇಕು. ಆದ್ದರಿಂದ ಎಲ್ಲರೂ ಕೂಡ ಸಂಧ್ಯಾವಂದನೆಯನ್ನು ನಿತ್ಯದಲ್ಲಿಯೂ ತಪ್ಪದೇ ಮಾಡಬೇಕು.
ಶ್ರೀಮಧ್ವೇಶಾರ್ಪಣಮಸ್ತು
0 Comments