Header Ads Widget

ॐ GSB Madhva Bhramins ॐ

ಬೃಹತೀಸಹಸ್ರ ಮಂತ್ರದ ಹೆಗ್ಗಳಿಕೆ

 


ಶ್ರೀಗುರುಭ್ಯೋ ನಮ: 


ಬೃಹತೀಸಹಸ್ರ ಮಂತ್ರದ ಹೆಗ್ಗಳಿಕೆ


ಇಂದ್ರ ದೇವರು ಭಗವಂತನ ಅನುಗ್ರಹದಿಂದ ವ್ರತ್ರಾಸುರನನ್ನು ಸಂಹಾರ ಮಾಡಿ ಲೋಕದ ದೃಷ್ಟಿಯಿಂದ ಬಂದಿರುವ ಬ್ರಹ್ಮಹತ್ಯಾ ಪರಿಹಾರಕ್ಕಾಗಿ ಕಳೆದು ಹೋದ ತನ್ನ ಮೊದಲಿನ ಅಧಿಪತ್ಯವು ಮತ್ತೆ ಸ್ಥಿರವಾಗಿ ನಿಲ್ಲುವುದಕ್ಕೆ ಮಹಾವ್ರತ ಎಂಬ ಯಾಗವನ್ನು ಮಾಡಿದರು. 


ಈ ಯಜ್ಞದಲ್ಲಿ ವಿಶ್ವಾಮಿತ್ರ ಋಷಿಗಳು ಹೋತೃ (ಋತ್ವಿಕ್); 

ಭೃಗು ಋಷಿಗಳು ಆಧ್ವರ್ಯ; 

ಚತುರ್ಮುಖ ಬ್ರಹ್ಮ ಮತ್ತು ವಾಯುದೇವರು ಉದ್ಗಾತೃ; 

ನಾರಾಯಣನು ಸದಸ್ಯನು; 

ಇತರ ಋಷಿಗಳು ಉಪಋತ್ವಿಜರಾದರು. 


ಆ ಕಾಲದಲ್ಲಿ ವಿಶ್ವಾಮಿತ್ರರು ನಾರಾಯಣನನ್ನು ಸ್ತುತಿಸಿದರು. 

ನಾರಾಯಣನು ವಾಯು (ಮುಖ್ಯಪ್ರಾಣ) ದೇವರಿಂದ ಕೂಡಿಕೊಂಡು ಇಂದ್ರನಲ್ಲಿ ಪ್ರವೇಶಿಸಿ, ವಿಶ್ವಾಮಿತ್ರ ಋಷಿಗಳಿಗೆ "ಬೃಹತೀಸಹಸ್ರ" ದಿಂದ ಸ್ತುತಿಸೆಂದು ಹೇಳಿದನು.


ವಿಶ್ವಾಮಿತ್ರರು ಆಗ ಬೃಹತೀಸಹಸ್ರವನ್ನು ಪರಮಾತ್ಮನಿಗೆ ಅತಿತೃಪ್ತಿಜನಕವೆಂದು ತಿಳಿದು ಬೃಹತೀಸಹಸ್ರ ಮಂತ್ರಗಳಿಂದ ಭಕ್ತಿಪೂರ್ವಕ ಶಂಸನ ಮಾಡಿದರು. 


ಇದನ್ನು ಕೇಳಿ ಹರಿ-ವಾಯುಗಳು ಸಂತುಷ್ಟರಾಗಿ ಇನ್ನೊಂದು ಸಲ ಸ್ತುತಿಸಿ ಎನಲು, ಪುನ: ಬೃಹತೀಸಹಸ್ರದಿಂದ ಸ್ತುತಿಸಿದರು.

ಅತಿಸಂತುಷ್ಟರಾದ ಹರಿ-ವಾಯುಗಳು ಮತ್ತೊಮ್ಮೆ ಸ್ತುತಿಸಿರೆಂದು ಹೇಳಿದರು. 


ಅದರಂತೆಯೇ ವಿಶ್ವಾಮಿತ್ರರು ಪರಮ ಭಕ್ತಿಯಿಂದ ಸ್ತುತಿಸಲು ಹರಿ-ವಾಯುಗಳು ಪರಮಸಂತುಷ್ಟರಾಗಿ ಕ್ರಮಶ: ಸಾಲೋಕ್ಯ ಸಾಮಿಪ್ಯ ವಿಷ್ಣುಸಹಸ್ರನಾಮಾದಿ ಸರ್ವನಾಮಾರ್ಥ ಜ್ಞಾನವನ್ನು ಕೊಟ್ಟರು. 


ಶ್ರೀಮದಾಚಾರ್ಯರು ತಮ್ಮ ಐತರೇಯ ಭಾಷ್ಯದಲ್ಲಿ "ಮಹದುಕ್ಥ" ಎಂದು ಕರೆಯಲ್ಪಡುವ ಬೃಹತೀಸಹಸ್ರ ಮಂತ್ರಗಳು ಅತಿಶ್ರೇಷ್ಠವಾದ ಪ್ರತಿಮೆಯೆಂದು ಪ್ರಮಾಣಗಳ ಮೂಲಕ ತಿಳಿಸಿರುತ್ತಾರೆ. 


ಇದರ ಮಹತ್ತ್ವವನ್ನು ತಿಳಿಸುವ ಸಂದರ್ಭದಲ್ಲಿ ಮತ್ಸ್ಯ, ಕೂರ್ಮಾದಿ ಭಗವಂತನ ಹತ್ತು ರೂಪಗಳು; 

ಕೇಶವಾದಿ ಇಪ್ಪತ್ತನಾಲ್ಕು ರೂಪಗಳು; 

ನಾರಾಯಣಾದಿ ಪಂಚರೂಪಗಳು; 

ವಿಶ್ವಾದಿ ಸಹಸ್ರರೂಪಗಳು; 

ಅಷ್ಟೇ ಏಕೆ! ಭಗವಂತನ ಅನಂತರೂಪಗಳು ಬೃಹತೀಸಹಸ್ರದಲ್ಲಿ ಸನ್ನಿಹಿತವಾಗಿದೆ. 


ಅಷ್ಟೇ ಅಲ್ಲದೇ, ಈ ಎಲ್ಲಾ ಅನಂತರೂಪಗಳು ಬೃಹತೀಸಹಸ್ರವೆಂದು ಹೇಳಲ್ಪಡುವ ಒಂದು ಸಾವಿರ ಋಗ್ವೇದದ ಮಂತ್ರಗಳಿಂದ ಪ್ರತಿಪಾದ್ಯಗಳೂ ಆಗಿವೆ. 


"ಸಹಸ್ರ" ಶಬ್ದಕ್ಕೆ 'ಸಾವಿರ' ಎಂದು ಲೋಕ ಪ್ರಸಿದ್ಧವಾದರೂ 'ಅನಂತ' ಎಂಬುವುದೇ ಮುಖ್ಯಾರ್ಥ. 


ಆದ್ದರಿಂದಲೇ "ಮಹದುಕ್ಥ" ಎನ್ನುವ ಹೆಸರು ಬೃಹತೀಸಹಸ್ರಕ್ಕೆ ಅನ್ವರ್ಥಕವಾದದ್ದು. 


|| ಓಂ ತತ್ಸತ್ || 

*******

|| ಶ್ರೀಕೃಷ್ಣಾರ್ಪಣಮಸ್ತು || 

|| ನಾಹಂ ಕರ್ತಾ ಹರಿ: ಕರ್ತಾ || 

*******

ಸಂಗ್ರಹ:-


ವಿಜಯೇಂದ್ರ ರಾಮನಾಥ ಭಟ್.

ಶಿವಮೊಗ್ಗ.  Shivamogga. 

*******

Post a Comment

0 Comments