Header Ads Widget

ॐ GSB Madhva Bhramins ॐ

ಶ್ರಾದ್ಧದ ಮಹತ್ವ

 ಶ್ರಾದ್ಧದ ಮಹತ್ವ

 - ಒಂದು ಚಿಂತನೆ "


" ಶ್ರಾದ್ಧ " ಯೆಂದರೆ...


" ಶ್ರದ್ಧಯಾ ಕ್ರೀಯತೇ ಕರ್ಮ ಇತಿ ಶ್ರಾದ್ಧಮ್ " - ಶ್ರದ್ಧೆಯಿಂದ ಆಚರಿಸುವ ಕಾರ್ಯವೇ " ಶ್ರಾದ್ಧ " ಎಂದು ಕರೆಸಿಕೊಳ್ಳುತ್ತದೆ. ಅತ್ಯಂತ ನಿಷ್ಠೆಯಿಂದ ಪಿಂಡ ಪ್ರದಾನ ಮಾಡಿ ಪಿತೃ ದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ದನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ತನ್ನ ಪಿತೃಗಳಿಗೆ ಸದ್ಗತಿಯು ದೊರೆಯಲಿದೆಯೆಂದು ಪ್ರಾರ್ಥಿಸಬೇಕು.


ಕರ್ಮಭೂಮಿ ಯೆನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ " ಶ್ರಾದ್ಧ " ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದನ್ನು " ಪಿತೃ ಯಜ್ಞ " ಎಂದು ಕರೆಯುತ್ತಾರೆ.


" ಬ್ರಹ್ಮಾಂಡ ಪುರಾಣ " ದಲ್ಲಿ...


ಪಿತೃನ್ಯೂದ್ಧಿಶ್ಯ ವಿಪ್ರೇಭ್ಯೋ ದತ್ತಾಂ ಶ್ರಾದ್ಧಮುದಾಹೃತಮ್ ।।


ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು - ಹೊತ್ತು - ಸಾಕಿ - ಸಲುಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ - ತಾಯಿ - ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನ - ಜಲಾದಿಗಳನ್ನು ಕೊಡುವ ಪಿತೃ ಕಾರ್ಯಕ್ಕೆ " ಶ್ರಾದ್ಧ " ಎಂದು ಹೆಸರು.


" ಶ್ರಾದ್ಧ ಕಲ್ಪಲತಾ " ದಲ್ಲಿ....


ಪಿತೃನುದ್ಧಿಶ್ಯೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ ।

ಬ್ರಾಹ್ಮಣೈರ್ಯತ್ಸ್ವೀಕರಣಂ ತತ್ ಶ್ರಾದ್ಧಮ್ ।।


ಪಿತೃಗಳನ್ನುದ್ಧೇಶಿಸಿ ಶ್ರದ್ಧೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಬ್ರಾಹ್ಮಣರು ಸ್ವೀಕರಿಸುವುದಕ್ಕೆ " ಶ್ರಾದ್ಧ " ಎಂದು ಹೆಸರು.


ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯವನ್ನು ತನ್ನ ಪಿತೃಗಳನ್ನುದ್ಧೇಶಿಸಿ ಕೊಡುವ " ಪಿಂಡ ಪ್ರದಾನ " ಕ್ರಿಯೆಗೆ " ಶ್ರಾದ್ಧ " ಎಂದು ಹೆಸರು.


ಇಲ್ಲಿ ಕೆಲವರು ಪ್ರಶ್ನೆ ಮಾಡುವುದುಂಟು...


ನಮ್ಮನ್ನಗಲಿ ಹೋದ ಪಿತೃಗಳಿಗೆ ನಾವು ಕೊಡುವ ಜಲಾಂಜಲಿ - ಪಿಂಡ ಪ್ರಧಾನದಿಂದ ತೃಪ್ತಿಯಾಗುವುದು ಹೇಗೆ? ಅವರಿಗೆ ನಾವು ಕೊಟ್ಟಿದ್ದು ತಲುಪುವುದು ಹೇಗೆ?


ಇದಕ್ಕೆ ಉತ್ತರ ಹೀಗಿದೆ...


ನಾವು ಕೊಟ್ಟ ಅನ್ನವನ್ನು ಅಂದರೆ...


ಅದರ ಸಾರ ಭಾಗವನ್ನು ವಸು - ರುದ್ರ - ಆದಿತ್ಯ ತದಂತರ್ಗತ ಭಾರತೀ ರಾಮಣ ಮುಖ್ಯಪ್ರಾಣಾಂತರ್ಗತ ಪ್ರದ್ಯುಮ್ನ - ಸಂಕರ್ಷಣ - ವಾಸುದೇವ ರೂಪಿ ಭಗವಂತನು ಸ್ವೀಕರಿಸಿ ಅದನ್ನು ನಮ್ಮ ಪಿತೃಗಳು ಯಾವ ಯೋನಿಯಲ್ಲಿ ಎಲ್ಲಿ ಇರುವರೋ ಅಲ್ಲಿ ಅವರಿಗೆ ಆಹಾರ ರೂಪವಾಗಿ ಸೂಕ್ತ ರೀತಿಯಲ್ಲಿ ಕೊಟ್ಟು ಸಂತೋಷ ಪಡಿಸುತ್ತಾನೆ.


ಶ್ರಾದ್ಧ ಕರ್ತೃವಿನ ತಂದೆಯು / ಪಿತೃಗಳು ದೇವತ್ವವನ್ನು ಹೊಂದಿದ್ದರೆ ಆ ಅನ್ನವು ಅಮೃತವಾಗಿ, ಪಶುವಾಗಿದ್ದರೆ ಹುಲ್ಲಾಗಿ, ಸರ್ಪವಾಗಿದ್ದರೆ ವಾಯು ರೂಪವಾಗಿ, ಹದ್ದು ಮೊದಲಾದವಾಗಿದ್ದರೆ ಮಾಂಸವಾಗಿ, ಮನುಷ್ಯನಾಗಿದ್ದರೆ ಯೋಗ್ಯ ಅನ್ನವಾಗಿ ಅವರಿಗೆ ತಲುಪುತ್ತದೆ.


ಪಿತೃಗಳ ( ತಂದೆ - ತಾಯಿ - ಹಿರಿಯರು ) ತೃಪ್ತಿಗಾಗಿ ಶ್ರಾದ್ಧ ಕರ್ಮವನ್ನು ಮಾಡಲೇಬೇಕು ಎಂದು " ಕೂರ್ಮ ಪುರಾಣ " ದಲ್ಲಿ...


ಶ್ರಾದ್ಧಾತ್ಪರಾತ್ಪರಾನ್ನಾಸ್ತಿ ಶ್ರೇಯಸ್ಕರ ಮುದಾಹೃತಮ್ ।

ತಸ್ಮಾತ್ ಸರ್ವ ಪ್ರಯತ್ನೇನ ಶ್ರಾದ್ಧ೦ ಕುರ್ಯಾದ್ವಿಚಕ್ಷಣಃ ।।


ಮಾನವರಿಗೆ ತಮ್ಮ ಪಿತೃಗಳ ಶಾಸ್ತ್ರೋಕ್ತವಾದ ಶ್ರಾದ್ಧ ಕರ್ಮಕ್ಕಿಂತ ಶ್ರೇಯಸ್ಕರವಾದ ಕಾರ್ಯವು ಯಾವುದೂ ಇಲ್ಲ. ಆದುದರಿಂದ ವಿವೇಕಿಗಳೂ; ಜ್ಞಾನಿಗಳೂ ಸರ್ವ ಪ್ರಯತ್ನದಿಂದ ಶ್ರಾದ್ಧವನ್ನು ಮಾಡಬೇಕು.


" ಯಮ ಸ್ಮೃತಿ "


ಯೇ ಯಜಂತಿ ಪಿತೃನ್ ದೆವಾನ್ ಬ್ರಾಹ್ಮಣಾ: ಸರ್ವ ಕಾಮದಾನ್ ।

ಸರ್ವ ಭೂತಾಂತರಾತ್ಮಾನ್ ವಿಷ್ಣುಮೇವ ಯಜಂತಿ ತೇ ।।


ಯಾವ ಬ್ರಾಹ್ಮಣನು ಎಲ್ಲಾ ಇಷ್ಟಾರ್ಥವನ್ನು ಕೊಡುವವರಾದ ಪಿತೃಗಳನ್ನೂ; ದೇವತೆಗಳನ್ನೂ ಪೂಜಿಸುವರೋ ಅವರು ಎಲ್ಲಾ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ನಿಯಾಮಕನಾದ ಶ್ರೀ ಮಹಾವಿಷ್ಣುವನ್ನೇ ಪೂಜಿಸುತ್ತಾರೆ!!


ಶ್ರಾದ್ಧ ಕರ್ಮವನ್ನು ಮಾಡದಿದ್ದರೆ ಏನಾಗುತ್ತದೆ? ಎಂದು ಕೇಳುವವರಿಗೆ..


" ಹಾರಿತ ಸ್ಮೃತಿ " ಯು ಹೀಗೆ ಉತ್ತರಿಸುತ್ತದೆ...


ನ ಸಂತಿ ಪಿತರಶ್ಚೇತಿ ಕೃತ್ವಾ ಮನಸಿ ಯೋ ನರಃ ।

ಶ್ರಾದ್ಧ೦ ನ ಕುರುತೇ ತತ್ರ ತಸ್ಯ ರಕ್ತ೦ ಪಿಬಂತಿ ತೇ ।।


ಯಾವ ಮನುಷ್ಯರು ಪಿತೃಗಳೂ ಅಥವಾ ತಂದೆ - ತಾಯಿಗಳ ದೇಹವನ್ನು ಸುಟ್ಟು ಭಸ್ಮ ಮಾಡಿದ ಮೇಲೆ ಅವರಿಗೆ ಹೊಟ್ಟೆ ಇಲ್ಲ ಎಂಬ ಭಾವನೆಯಿಂದ ಪಿತೃಗಳ ಶ್ರಾದ್ಧಾದಿಗಳನ್ನು ಮಾಡುವುದಿಲ್ಲವೋ ಅಂಥವರ ಪಿತೃಗಳು ಸಿಟ್ಟಾಗಿ ನಾಸ್ತಿಕರ ರಕ್ತವನ್ನು ಕುಡಿಯುತ್ತಾರೆ.


ಇನ್ನು ಶ್ರಾದ್ಧವನ್ನು ಮಾಡುವವರು ನ್ಯಾಯದಿಂದ ಹಣದಿಂದಲೇ ಮಾಡಬೇಕೆಂದು " ಮಾರ್ಕಂಡೇಯ ಪುರಾಣ " ಈ ಕೆಳಗಿನಂತೆ ಖಚಿತ ಪಡಿಸಿದೆ.


ಅನ್ಯಾಯೋಪಾರ್ಜಿತೈರ್ವಿತ್ತೈ: ಯತ್ ಶ್ರಾದ್ಧ೦ ಕ್ರೀಯತೇ ನರೈ: ।

ತೃಪ್ಯಂತಿ ತೇನ ಚಾಂಡಾಲಾ: ಪುಲ್ಕಸಾದ್ಯಾಶ್ಚಯೋನಯಃ ।।


ಮಾನವರು ಅನ್ಯಾಯ - ಅಧರ್ಮದಿಂದ ಹಣವನ್ನು ಗಳಿಸಿ ಅದರಿಂದ ಶ್ರಾದ್ಧ ಮಾಡಿದರೆ ಆ ಶ್ರಾದ್ಧದಿಂದ ಚಾಂಡಾಲ - ಪುಲಸ್ಕ ( ಬ್ರಾಹ್ಮಣನಿಗೆ ಕ್ಷತ್ರೀಯ ಜಾತಿಯಲ್ಲಿ ಹುಟ್ಟಿದ ಮಿಶ್ರ ಜಾತಿಯವ ) ಮುಂತಾದ ಪಾಪಿಗಳಿಗೆ ತೃಪ್ತಿಯಾಗುವುದೇ ಹೊರತು ಪಿತೃಗಳಿಗೆ ತೃಪ್ತಿಯಾಗುವುದೇ ಇಲ್ಲ!!

***


ಈ ಪವಿತ್ರವಾದ ಪಿತೃ ಯಜ್ಞದಲ್ಲಿ ಶ್ರೀ ಜನಾರ್ದನ ರೂಪಿಯಾದ ಶ್ರೀ ಪರಮಾತ್ಮನನ್ನೇ " ಶ್ರಾದ್ಧಾ ಸ್ವಾಮಿ " ಎಂದು ಭಾವಿಸಿಬೇಕು.


ಶ್ರಾದ್ಧದಲ್ಲಿ ಬಳಸುವ ಎಳ್ಳು - ದರ್ಭೆ ಮೊದಲಾದ ಪದಾರ್ಥಗಳಲ್ಲಿ ಶ್ರೀ ಜನಾರ್ದನನು ಒಂದೊಂದು ರೂಪದಿಂದ ನೆಲೆಸುವನು.


ವಿಶ್ವೇ ದೇವತೆಗಳ ಅಂತರ್ಯಾಮಿಯಾಗಿ 3555 ರೂಪಗಳಿಂದ ಶ್ರಾದ್ಧ ಕರ್ಮಕ್ಕೆ ಯಾವ ವಿಘ್ನಗಳು ಬರದಂತೆ ಶ್ರೀ ಜನಾರ್ದನನು ಶ್ರಾದ್ಧ ಕರ್ಮವನ್ನು ರಕ್ಷಿಸುವನು.


ಶ್ರೀ ಜನಾರ್ದನನ ಹೆಸರೇ ಇದನ್ನು ಹೇಳುತ್ತದೆ...


ಜ = 3

ನಾ = 5

ರ್ದ = 5

ನ = 5


ಶ್ರಾದ್ಧ ಕಾಲದಲ್ಲಿ ಪಠಿಸಬೇಕಾದವುಗಳು...


೧. ಶ್ರೀ ಪದ್ಮ ಪುರಾಣಾಂತರ್ಗತ ಔರ್ಧ್ವ ದೇಹಿಕ ಶ್ರೀ ರಾಮ ಸ್ತೋತ್ರ

೨. ಕಾಠಕೋಪನಿಷತ್

೩. ಶ್ರೀ ವಿಜಯವಿಠ್ಠಲ ವಿರಚಿತ " ಪೈತೃಕ ಸುಳಾದಿ "

೪. ಶ್ರೀ ಜಗನ್ನಾಥದಾಸ ಕೃತ " ಪಿತೃ ಗಣ ಸಂಧಿ "


ಹೀಗೆ ಶ್ರೀ ಜನಾರ್ದನನ ರೂಪಗಳು.


ನರಕೋದ್ಧಾರ ಇದರಿಂದ ಸತ್ಯ ಪಿತೃಗಳಿಗೆ ।

ನರಕಾತೀತ ನಮ್ಮ ವಿಜಯವಿಠ್ಠಲ ಸುಳಿವಾ ।।

ಕೃಪೆ :Whatsapp


Post a Comment

0 Comments