ಮಹಾಲಯ ತರ್ಪಣ ಎಂದರೇನು, ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವುದು ಹೇಗೆ?
ಪಿತೃ ಪಕ್ಷ ಎಂಬುವುದು ಪಿತೃಗಳನ್ನು ಸ್ಮರಿಸುವ ದಿನಗಳಾಗಿವೆ. ಪಿತೃಪಕ್ಷ ಸೆಪ್ಟೆಂಬರ್ 20ರಂದು ಪ್ರಾರಂಭವಾಗಿ ಅಕ್ಟೋಬರ್ 6ಕ್ಕೆ ಕೊನೆಯಾಗುವುದು. ಇದನ್ನು ಮಹಾಲಯ ಶ್ರಾದ್ಧ ಎಂದು ಕೂಡ ಕರೆಯಲಾಗುವುದು. ಈ 16 ದಿನಗಳು ಹಿಂದೂಗಳಿಗೆ ತುಂಬಾ ಮಹತ್ವವಾದ ದಿನವಾಗಿದೆ. ಈ ದಿನಗಳಲ್ಲಿ ಪಿತೃಗಳಿಗೆ ತರ್ಪಣ ನೀಡುವುದರಿಂದ ಅವರಿಗೆ ಮೋಕ್ಷ ಸಿಗುವುದು, ನಮಗೆ ಪುಣ್ಯ ಸಿಗುವುದು.
ಪಿತೃ ಪಕ್ಷದ ಸಮಯದಲ್ಲಿ ತರ್ಪಣ ನೀಡಿದಾಗ ಪಿತೃಗಳು ತಮ್ಮ ವಂಶಸ್ಥರಿಗೆ ಆರೋಗ್ಯ, ಐಶ್ವರ್ಯ ನೀಡಿ ಅನುಗ್ರಹಿಸುತ್ತಾರೆ. ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವುದು ತುಂಬಾ ಮಹತ್ವವಾದ ಕಾರ್ಯವಾಗಿದೆ. ಈ 16 ದಿನಗಳಲ್ಲಿ ಯಾವುದಾದರೂ ಒಂದು ದಿನ ತಮ್ಮ ಪಿತೃಗಳಿಗೆ ತರ್ಪಣ ನೀಡಬಹುದು. ನಾವು ಪಿತೃ ತರ್ಪಣ ನೀಡಿದಾಗ ನಮ್ಮನ್ನು ಬಿಟ್ಟು ಅಗಲಿರುವ ನಮ್ಮ ಹಿರಿಯರು ಬಂದು ನಮ್ಮ ಆಶೀರ್ವದಿಸುತ್ತಾರೆ ಎಂದು ನಂಬಲಾಗುವುದು.
ತರ್ಪಣ ಎಂಬುವುದು ತರ್ಪ್ ಎಂಬ ಪದದಿಂದ ಬಂದಿದೆ, ತರ್ಪ್ ಎಂದರೆ ತೃಪ್ತಿ ಪಡಿಸುವುದು ಅಥವಾ ಇನ್ನೊಬ್ಬರನ್ನು ಮೆಚ್ಚಿಸುವುದು ಎಂಬ ಅರ್ಥವಾಗಿದೆ.
ಪಿತೃಗಳಿಗೆ ತರ್ಪಣ ನೀಡಿದಾಗ ಏನಾದರೂ ಆಸೆ ತೀರದೆ ಅಲೆದಾಡುತ್ತಿರುವ ಆತ್ಮಗಳಿಗೆ ತೃಪ್ತಿ ಸಿಗುವುದು. ಅವರಿಗೆ ಮೋಕ್ಷ ಸಿಗುವುದರಿಂದ ಸ್ವರ್ಗ ಸಿಗುವಂತಾಗುವುದು.
ತರ್ಪಣ ಕಾರ್ಯ ಹೇಗೆ ಮಾಡಬೇಕು ?
ತರ್ಪಣ ಕಾರ್ಯವನ್ನು ನದಿಯ ಬಳಿ ಮಾಡಬೇಕು. ನದಿ ದಡದಲ್ಲಿ ಅಥವಾ ಸೊಂಟದವರೆಗೆ ನೀರು ಇರುವ ಕಡೆ ನಿಂತು ತರ್ಪಣ ನೀಡಲಾಗುವುದು. ದಕ್ಷಿಣದ ಕಡೆ ಮುಖ ಮಾಡಿ ನಿಂತು ಪಿತೃ ಆತ್ಮಗಳನ್ನು ಕರೆಯಲಾಗುವುದು. ಪಿತೃಗಳ ಹೆಸರುಗಳನ್ನು ಹೇಳುತ್ತಾ ಅವರನ್ನು ನೆನಪಿಸಿಕೊಳ್ಳಲಾಗುವುದು. ಮಂತ್ರ ಹೇಳುತ್ತಾ ನೀರು, ಹಾಲು ಹಾಗೂ ಕಪ್ಪು ಎಳ್ಳು ಬಿಡಲಾಗುವುದು. ತರ್ಪಣ ನೀಡುವಾಗ ಅನ್ನ ಹಾಗೂ ಕಪ್ಪು ಎಳ್ಳು ಅವಶ್ಯಕವಾಗಿದೆ. ಎಳ್ಳು ಅರ್ಪಿಸಿದರೆ ಪಿತೃಗಳ ಆತ್ಮಗಳು ತೃಪ್ತರಾಗುತ್ತಾರೆ.
ಪಿತೃಪಕ್ಷದಲ್ಲಿ ಶ್ರಾದ್ಧ ಮಾಡುವವರು ಯಾವ ನಿಯಮಗಳನ್ನು ಪಾಲಿಸಬೇಕು ?
ಆ ದಿನದಂದು ಕ್ಷೌರ, ದ್ವಭೋಜನ, ಅಭ್ಯಂಜನ ಸ್ನಾನ, ಪರಾನ್ನ ಭೋಜನ, ತಾಂಬೂಲ ಸೇವನೆ ಇವುಗಳನ್ನು ಮಾಡುವಂತಿಲ್ಲ. ಶ್ರಾದ್ಧದ ಹಿಂದಿನ ದಿನದಿಂದಲೇ ಬ್ರಹ್ಮಚರ್ಯ ವ್ರತ ಪಾಲಿಸಬೇಕು. ದೈವ ಕಾರ್ಯಕ್ಕಿಂತ ಮಿಗಿಲಾಗಿ ಭಕ್ತಿ ಶ್ರದ್ಧೆಯಿಂದ ಶ್ರಾದ್ಧ ಮಾಡಬೇಕು.
ಶ್ರಾದ್ಧ ಮಾಡುವಾಗ ಹೇಳಬೇಕಾದ ಮಂತ್ರಗಳು
ತಿಲೈಃ ಆಜ್ಯೇನ ಹೋತವ್ಯಂ ಸರ್ವಪಾಪಹರಾಸ್ತಿಲಾಃ|
ತಿಲಾಃ ರಕ್ಷಂತ್ವಸುರಾಣಾಂ ದರ್ಭಾ ರಕ್ಷಂತು ರಕ್ಷಸಾಂ|
ತಿಲಸ್ನಾಯೀ ತಿಲೋದ್ವರ್ತೀ ತಿಲಹೋಮೀ ತಿಲೋದಕೀ|
ತಿಲಭೋಕ್ತಾ ಚ ದಾತಾ ಚ ಷಟ್ ತಿಲಾಃ ಪಾಪನಾಶನಾಃ||
ಭೂತ, ಪ್ರೇತಗಳಿಂದ ಇರುವ ಬಾಧೆ, ತೊಂದರೆ ದೂರವಾಗಿ, ಪಾಪಗಳು ವಿಮೋಚನೆಯಾಗುವುದು, ಪಿತೃಗಳಿಗೆ ಮೋಕ್ಷ ಸಿಗುವುದು ಎಂಬುವುದು ಇದರ ಅರ್ಥವಾಗಿದೆ.
ಗಮನಿಸಬೇಕಾದ ಅಂಶ
ಪಿಂಡವನ್ನು ನೀರಿನಲ್ಲಿ ತೇಲಿ ಬಿಟ್ಟಾಗ ಅಥವಾ ಕಾಗೆ, ಹಸುಗಳಿಗೆ ನೀಡಿದಾಗ ಯಾವುದೇ ಕಾರಣಕ್ಕೆ ಅದು ಒಡೆಯುವುದನ್ನು ನೋಡಬಾರದು, ಪಿಂಡವನ್ನು ದಕ್ಷಿಣ ದಿಕ್ಕಿಗೆ ತಿರುಗಿ ಬಿಡಬೇಕು. ಪಿಂಡ ಬಿಟ್ಟ ಬಳಿಕ ಹಿಂತಿರುಗಿ ನೋಡದೆ ಬರಬೇಕು.
0 Comments