ಕೆಲವರಲ್ಲಿ ಒಂದು ಭ್ರಾಂತಿ ಇದೆ.
ಮಾಧ್ವರು ಕೇವಲ ವಿಷ್ಣುವಿನ ಪೂಜೆ ಮಾಡುತ್ತಾರೆ. ಬೇರೆ ದೇವತೆಗಳ ಪೂಜೆ ಮಾಡುವುದೇ ಇಲ್ಲ. ಬೇರೆ ದೇವತೆಗಳ ಪ್ರತಿಮೆ ಇದ್ದರೂ, ಮತಾಂತರ ಮಾಡಿ ಅಲ್ಲಿಯೂ ವಿಷ್ಣುವಿನ ಪೂಜೆಯನ್ನೇ ಮಾಡುತ್ತಾರೆ. ಇದು ಶಾಸ್ತ್ರನಿಷಿದ್ಧ. ಹಾಗೆ ಹೀಗೆ ಎಂದು ಕಪೋಲಕಲ್ಪನೆ ಮಾಡಿಕೊಂಡವರು ಕೆಲವರು. ಕೆಲವರು ಪಾಪ ಸಂದೇಹದಿಂದ ಪ್ರಶ್ನಿಸುವವರೂ ಇದ್ದಾರೆ. ಇರಲಿ.
ಆದರೆ ಇದು ಕೇವಲ ಭ್ರಾಂತಿ.
ಮಾಧ್ವರು ವಿಷ್ಣುವಿನ ಪೂಜೆಯ ಜೊತೆಗೆ, ಚತುರ್ಮುಖ, ಶಿವ, ಸುಬ್ರಹ್ಮಣ್ಯಾದಿ ಬೇರೆ ದೇವತೆಗಳ ಆರಾಧನೆಯನ್ನು, ಪೂಜೆ, ಭಜನೆ ಎಲ್ಲವನ್ನೂ ಮಾಡುತ್ತಾರೆ.
ಮಾಧ್ವರು ವೈಷ್ಣವರೆಂದ ಮಾತ್ರಕ್ಕೆ, ವಿಷ್ಣುವನ್ನು ಬಿಟ್ಟು ಬೇರೆ ದೇವತೆಗಳೇ ಇಲ್ಲ, ಅಥವಾ ಅವರಿಗೆ ಪೂಜೆಯೇ ಇಲ್ಲ, ಎಂದು ಹೇಳುವುದಿಲ್ಲ. ಯಾರಿಗೆ ಹೇಗೆ ಪೂಜೆ ಮಾಡಬೇಕೆಂದು ಶಾಸ್ತ್ರಗಳು ಹೇಳಿದೆಯೋ, ಹಾಗೆಯೇ ಆಚರಿಸುವ ಪದ್ಧತಿ ಮಾಧ್ವರಲ್ಲಿ ಇದೆ.
ಹಾಗಾಗಿಯೇ ವಿಷ್ಣುವನ್ನು ಹೊರತು ಪಡಿಸಿ, ಅನ್ಯದೇವತೆಗಳ ಪೂಜೆ ಮಾಡುವಾಗ ಅಂತರ್ಯಾಮಿ ರೂಪದ ಜೊತೆ, ಪೂಜೆ ಮಾಡುವ ಪದ್ಧತಿ ಮಾಧ್ವರಲ್ಲಿ ಬಂದಿದೆ. ಇದು ವೇದಾಂತದಿಂದ ಬರುವ ಮತಿ. ಇದು ವೈದಿಕ ಪದ್ಧತಿ.
ಈ ಅಂತರ್ಯಾಮಿ ಪ್ರಕರಣಕ್ಕೆ ಸಂಬಂಧಪಟ್ಟ ವಿಷಯವನ್ನು, ನಾನು ಹಿಂದೆ ನಿರೂಪಣೆ ಮಾಡಿದ್ದೆ.
ಅನೇಕರಲ್ಲಿ ಅನೇಕದಿನಗಳಿಂದ ಒಂದು ಗೊಂದಲ ಇದೆ.
ಈ ಪ್ರಕರಣದಲ್ಲಿ ನಾರಾಯಣಾಖ್ಯ ಎಂದು ಶಂಕರಾಚಾರ್ಯರು ಹೇಳಿದ್ದರೂ, ಅದು ಪರಬ್ರಹ್ಮ ಎಂಬ ಅರ್ಥದಲ್ಲಿ ಹೇಳಿದ್ದು, ಅದು ವೈಷ್ಣವರ ವಿಷ್ಣು ಅಲ್ಲ. ಎಂದು ಕೆಲವರ ಅಭಿಪ್ರಾಯ.
ಹಾಗಾಗಿ ಗೀತಾಭಾಷ್ಯದ ಆರಂಭದಲ್ಲಿ ಶಂಕರಾಚಾರ್ಯರು ನಾರಾಯಣಃ ಪರೋಽವ್ಯಕ್ತಾತ್… ಎಂದಲ್ಲೂ, ಅದು ನಾರಾಯಣ ಎಂದು ವೈಷ್ಣವರ ಸರ್ವೋತ್ತಮನಾದ ವಿಷ್ಣುವನ್ನು ಹೇಳುತ್ತಿರುವುದಲ್ಲ. ನಿರ್ಗುಣವಾದ, ಶುದ್ಧ ಚೈತನ್ಯವಾದ, ಪರಬ್ರಹ್ಮನನ್ನು ಹೇಳುವುದು. ಇತ್ಯಾದಿಯಾಗಿ ಹೇಳುತ್ತಾರೆ.
ಅಂದರೆ ನಾರಾಯಣ, ಶಿವ, ಸುಬ್ರಹ್ಮಣ್ಯ ಇತ್ಯಾದಿ ಎಲ್ಲವೂ ಶುದ್ಧ ಚೈತನ್ಯದ ಬೇರೆ ಬೇರೆ ಹೆಸರುಗಳು ಅಷ್ಟೇ. ಆದ್ದರಿಂದ ಸುಬ್ರಹ್ಮಣ್ಯ, ಶಿವ ಎಲ್ಲರೂ ಪರಬ್ರಹ್ಮ ಸ್ವರೂಪರೇ.
ಹಾಗಾಗಿ ನಾರಾಯಣಾಖ್ಯ ಎಂದು ಅಂತರ್ಯಾಮಿ ಪ್ರಕರಣದಲ್ಲಿ ಹೇಳಿದ - ನಾರಾಯಣ ಶಬ್ದವನ್ನು ಇಟ್ಟುಕೊಂಡು, ಎಲ್ಲಾ ದೇವತೆಗಳ ಅಂತರ್ಯಾಮಿಯಾಗಿ ಸಗುಣನಾದ ವೈಷ್ಣವರ ನಾರಾಯಣನನ್ನು ಅರ್ಥ ಮಾಡುವುದು ಸರಿಯೇ? ಎಂದು ಕೆಲವರಿಗೆ ಪ್ರಶ್ನೆ ಬರುವುದು.
ಇನ್ನು ಕೆಲವರು ಯಾವ ಹಂತದಲ್ಲಿ ಇದ್ದಾರೆ ಎಂದರೆ, ವಿಷ್ಣು ಎಂದು ಒಂದು ವ್ಯಕ್ತಿ ಇಲ್ಲ. ಕೇವಲ ಹೆಸರು. ಅಥವಾ ವ್ಯಾಪ್ತವಾದದ್ದಕ್ಕೆ ವಿಷ್ಣು ಎಂದು ಕರೆಯುವುದು ಅಷ್ಟೇ. ವಿಷ್ಣು ಎಂದು ವೈಷ್ಣವರು ಕರೆಯುವ ಒಂದು ಉತ್ತಮ ಚೇತನ ಎಂಬ ವಸ್ತುವೇ ಇಲ್ಲ. ಕಲ್ಪನೆ ಮಾತ್ರ ಎಂಬ ವಾದ.
ಶಾಸ್ತ್ರಗಳಲ್ಲಿ ಎಲ್ಲಿಯೇ ವಿಷ್ಣುವಿನ ಬಗ್ಗೆ ಬಂದರೂ, ಅದೆಲ್ಲಾ "ವ್ಯಾಪಕವಾದ ಪರಬ್ರಹ್ಮನಿಗೆ ಸಂಬಂಧಪಟ್ಟದ್ದು" ಎಂದು ಅರ್ಥ ಮಾಡುವ ಪ್ರವೃತ್ತಿ. ಒಂದು ರೀತಿ ವಿಷ್ಣು ಎಂಬ ಸ್ವರೂಪವನ್ನೇ ಅಲ್ಲಗಳೆಯುವ ಪರಿಸ್ಥಿತಿ.
ಇದರ ಉತ್ತರವನ್ನು ಗಮನಿಸೋಣ.
ಮೊದಲನೇಯದಾಗಿ ಶಂಕರಾಚಾರ್ಯರು ಬೇಕಾದಷ್ಟು ಹೆಸರಿದ್ದರೂ, ಅಂತರ್ಯಾಮಿ ಪ್ರಕರಣದಲ್ಲಿ ನಾರಾಯಣ ಹೆಸರೇ ಹೇಳುವ ಅವಶ್ಯಕತೆ ಏನು? ಕೇವಲ ನಾರಾಯಣ ಎಂಬುದು ಹೆಸರೆಂದು ಹೇಳುವುದಾದರೆ "ಶಿವಾಖ್ಯಃ, ಬ್ರಹ್ಮಾಖ್ಯಃ" ಅಥವಾ "ನಾರಾಯಣಾದ್ಯಾಖ್ಯಃ" ಇತ್ಯಾದಿ ಹೇಳಬಹುದಿತ್ತು. ಆದರೆ ಅಂತರ್ಯಾಮಿ ಬಗ್ಗೆ ಹೇಳುವಾಗ ಕೇವಲ ನಾರಾಯಣಾಖ್ಯಃ ಎಂದು ಹೇಳಿದ್ದು ಯಾಕೆ?
ಇನ್ನು ಆತ್ಮೇತಿ ತೂಪಗಚ್ಛಂತಿ ಗ್ರಾಹಂತಿ ಚ ಎಂಬ ಸೂತ್ರಕ್ಕೆ ವ್ಯಾಖ್ಯಾನ ಮಾಡುವಾಗ –
ಅನ್ಯತ್ವೇಽಪಿ ತಾದಾತ್ಮ್ಯದರ್ಶನಂ ಶಾಸ್ತ್ರಾತ್ ಕರ್ತವ್ಯಂ ಪ್ರತಿಮಾದಿಷ್ವಿವ ವಿಷ್ಣ್ವಾದಿದರ್ಶನಮ್ ಇತಿ ಚೇತ್ ಕಾಮಮೇವಂ ಭವತು |
ಎಂಬಲ್ಲಿ ವಿಷ್ಣು ಶಬ್ದಕ್ಕೆ ಏನರ್ಥ? ಪರಬ್ರಹ್ಮ ಎಂದು ಅರ್ಥ ಮಾಡಲಾಗುವುದೇ? ಪರಬ್ರಹ್ಮ ನನ್ನು ಸ್ವೀಕರಿಸಿವುದಾದರೆ, ಆದಿಶಬ್ದದಿಂದ ಯಾವುದರ ಗ್ರಹಣ?
ದಹರ ಉತ್ತರೇಭ್ಯಃ ಎಂಬ ಸೂತ್ರಕ್ಕೆ ವ್ಯಾಖ್ಯಾನ ಮಾಡುವಾಗ –
ಯಥಾ ಶಾಲಗ್ರಾಮೇ ವಿಷ್ಣುಃ ಸಂನಿಹಿತಃ ಇತಿ ತದ್ವತ್
ಎಂಬಲ್ಲಿಯೂ ವಿಷ್ಣು ಶಬ್ದಕ್ಕೆ ಏನರ್ಥ?
ನಾರಾಯಣ ಎಂಬ ಸಗುಣ ಬ್ರಹ್ಮನೋ? ಅಥವಾ ನಿರ್ಗುಣ ಬ್ರಹ್ಮನೋ?
ಗೀತಾಭಾಷ್ಯದ ಆರಂಭದಲ್ಲಿ -
ಜಗತಃ ಸ್ಥಿತಿಂ ಪರಿಪಿಪಾಲಯಿಷುಃ ಸ ಆದಿಕರ್ತಾ ನಾರಾಯಣಾಖ್ಯಃ ವಿಷ್ಣುಃ …
ಎಂಬಲ್ಲಿಯೂ ನಾರಾಯಣ, ವಿಷ್ಣು ಶಬ್ದಕ್ಕೆ ಪರಬ್ರಹ್ಮ ಎಂದು ಅರ್ಥ ಮಾಡಲಾಗುವುದೇ?
ಹೀಗೆ ಹಲವು ಕಡೆ ವಿಷ್ಣು ಶಬ್ದ ಬಳಿಸಿದಲ್ಲಿ, ವಿಷ್ಣು ಶಬ್ದಕ್ಕೆ ಲಕ್ಷ್ಮೀಪತಿಯಾದ ಒಬ್ಬ ವ್ಯಕ್ತಿಯನ್ನು ಒಪ್ಪದೇ, ಕೇವಲ ಹೆಸರು ಮಾತ್ರ. ಅದು ಪರಬ್ರಹ್ಮ ಎಂದು ಹೇಳುವುದು ಸರಿಯೇ? ಆಲೋಚನೆ ಮಾಡಿ.
ಅದ್ವೈತ ಸಿದ್ಧಾಂತದಲ್ಲಿ ಪರಬ್ರಹ್ಮವನ್ನು ಮಾತ್ರ ಪಾರಮಾರ್ಥಿಕ ಸತ್ಯವಾಗಿ ಒಪ್ಪಿರಬಹುದು. ಆದರೆ ನಾರಾಯಣನಿಗೆ ಅಂದರೆ ವಿಷ್ಣುವಿಗೆ ಅಸ್ತಿತ್ವವೇ ಇಲ್ಲ. ಕೇವಲ ನಾಮ ಮಾತ್ರ, ಎಂಬ ಕಲ್ಪನೆ ತೀರಾ ಬಾಲಿಶವಾದ ಪ್ರವೃತ್ತಿ. ಜೊತೆಗೆ ವಿಷ್ಣುದ್ವೇಷವನ್ನು ಸೂಚಿಸುತ್ತದೆ.
ಇನ್ನು ಅಂತರ್ಯಾಮಿ ವಿಷಯವನ್ನು ನೋಡುವುದಾದರೆ – ಅಂತರ್ಯಾಮಿ ಪ್ರಕರಣದಲ್ಲಿ ನಾರಾಯಣಾಖ್ಯಃ ಎಂದು ನಾರಾಯಣನನ್ನೇ ಹೇಳಿದ್ದು. ವೈಷ್ಣವರು ಯಾವ ವಿಷ್ಣುವನ್ನು ಸರ್ವೋತ್ತಮ ಎಂದು ಹೇಳುವರೋ ಅದೇ ವಿಷ್ಣುವನ್ನು ಅಂತರ್ಯಾಮೀ ಎಂದು ತಿಳಿಯಬೇಕು.
ಅಂದರೆ ಅಂತರ್ಯಾಮಿಯಾದ ನಾರಾಯಣನು ಸಗುಣ ಬ್ರಹ್ಮ. ನಿರ್ಗುಣ ಬ್ರಹ್ಮನಲ್ಲ. ಹಾಗಾಗಿ ಅಂತರ್ಯಾಮಿಯಾಗಿ ದೇವತೆಗಳಲ್ಲಿ ನಾರಾಯಣನನ್ನು ಉಪಾಸನೆ ಮಾಡಬೇಕು ಎಂಬುದು ಉಪನಿಷತ್ತಿನ ಆಂತರ್ಯ.
ಸ್ವತಃ ನಾರಾಯಣನೇ ಅಂತರ್ಯಾಮಿ ಆಗಿರುವುದರಿಂದ ಅವನಿಗೆ ಮತ್ತೊಬ್ಬ ಅಂತರ್ಯಾಮೀ ಇಲ್ಲ. ಹಾಗಾಗಿ ರಾಮ ಕೃಷ್ಣ ನರಸಿಂಹಾದಿ ರೂಪಗಳ ಪೂಜೆಯಲ್ಲಿ ಅಂತರ್ಯಾಮಿಯ ವಿವೇಚನೆ ಇಲ್ಲ. ರಾಮಾಂತರ್ಗತ ಎಂಬ ಪ್ರಶ್ನೆ ಬರುವುದಿಲ್ಲ.
ಆದ್ದರಿಂದ ಸುಬ್ರಹ್ಮನ್ಯನನ್ನು ಪೂಜಿಸುವಾಗ ಕೇವಲ ಸುಬ್ರಹ್ಮಣ್ಯನಿಗೆ ಪೂಜಿಸದೇ, ಒಳಗಿರುವ ಅಂತರ್ಯಾಮಿಯಾದ ನಾರಾಯಣನಿಗೂ ಪೂಜಿಸಬೇಕು. ಅದನ್ನೇ ಮಾಧ್ವರು ಮಾಡುವುದು. ಹಾಗಾಗಿ ಮಾಧ್ವರು ಸುಬ್ರಹ್ಮಣ್ಯನ ಅಂತರ್ಯಾಮಿಯಾದ ನಾರಾಯಣನ ರೂಪವನ್ನು ಪೂಜೆ ಮಾಡಿದಾಗ ಮಾತ್ರ ಅದು ವೇದಾಂತಕ್ಕೆ ಅನುಗುಣವಾಗುತ್ತದೆ. ಸತ್ಯ ಹೀಗಿರುವಾಗ ತಿಳಿಯದೇ, ಮಾಧ್ವರು ಮಾಡುವ ಪೂಜೆ ದೇವರಿಗೆ ಸೇರುವುದಿಲ್ಲ ಎನ್ನುವುದು ಸರಿಯಲ್ಲ.
ಅಲ್ಲ. ಇದೆಲ್ಲಾ ಹೃಷೀಕೇಶನ ಕಲ್ಪನೆ ಆಯಿತು.
"ನಾರಾಯಣಾಖ್ಯ" ಎಂದು ಅಂತರ್ಯಾಮಿ ಪ್ರಕರಣದಲ್ಲಿ ಹೇಳಿದ ನಾರಾಯಣ ಶಬ್ದಕ್ಕೆ ಸಗುಣನಾದ ವಿಷ್ಣು ಎಂಬ ಅರ್ಥ ಸರಿಯೇ? ಎಂಬ ಪ್ರಶ್ನೆಗೆ ಉತ್ತರವನ್ನು ಅದ್ವೈತ ವಿದ್ವಾಂಸರು ಹೇಳುತ್ತಾರೆ.
ಅದ್ವೈತ ಮತದ ಪ್ರಸಿದ್ಧ ವಿದ್ವಾಂಸರಾದ ಎಸ್ ಸುಬ್ರಹ್ಮಣ್ಯಶಾಸ್ತ್ರಿಗಳು ಶಂಕರರ ಉಪನಿಷದ್ಭಾಷ್ಯಗಳನ್ನು ಸಂಪಾದನೆ ಮಾಡಿದ್ದು, ನಾರಾಯಣಾಖ್ಯಃ ಎಂಬ ಶಂಕರ ಭಾಷ್ಯದ ವಾಕ್ಯಕ್ಕೆ ಫುಟ್ ನೋಟ್ ನಲ್ಲಿ ಹೀಗೆ ಬರೆದಿರುತ್ತಾರೆ –
ಈಶ್ವರೋ ನಾರಾಯಣಾಖ್ಯಃ ಇತಿ ನಿಯಮನಸ್ಯ ಸ್ಥಿತಿಹೇತುತ್ವರೂಪತ್ವಾತ್ ವಿಷ್ಣೋಶ್ಚ ತಥಾತ್ವಾತ್ | ಅನೇನ ಅಂತರ್ಯಾಮೀ ಸಗುಣಬ್ರಹ್ಮಸ್ವರೂಪ ಇತಿ ಸ್ಪಷ್ಟಂ ಪ್ರಧಾನಂ ತು ಅದೃಷ್ಟತ್ವಾನ್ವಯೇಽಪಿ ದ್ರಷ್ಟೃತ್ವಾನನ್ವಯಾತ್ ನಾಂತರ್ಯಾಮೀ |
ಎಂದು ಬರೆದಿದ್ದಾರೆ.
ಇದರ ತಾತ್ಪರ್ಯ (ನನಗೆ ತಿಳಿದಂತೆ) –
ಅಂತರ್ಯಾಮೀ ಪ್ರಕರಣದಲ್ಲಿ ಹೇಳಿದ ನಾರಾಯಣ ಎಂಬ ಹೆಸರಿನವನು ವಿಷ್ಣುವೇ ಆಗಿದ್ದಾನೆ. ನಿಯಮನ ಎಂಬುದು ಸ್ಥಿತಿಗೆ ಸಂಬಂಧಿಸಿದ್ದು. ಸ್ಥಿತಿ ಮಾಡುವವನು ನಾರಾಯಣ ಎಂಬುದು ಅದ್ವೈತಸಿದ್ಧಾಂತವೂ ಒಪ್ಪಿದ ವಿಷಯ. ಆದ್ದರಿಂದ ಅಂತರ್ಯಾಮಿಯಾಗಿ ಇರುವವನು ಸಗುಣ ಬ್ರಹ್ಮನಾದ ನಾರಾಯಣನೇ. ಎಂದು ಬರೆದಿದ್ದಾರೆ.
ಅಂದರೆ ವೈಷ್ಣವರು ಹೇಳುವ ವಿಷ್ಣು. ರಾಮ ಕೃಷ್ಣಾದಿ ರೂಪವನ್ನು ಸ್ವೀಕರಿಸಿದ ನಾರಾಯಣ. ಪ್ರಧಾನವು ಅಂತರ್ಯಾಮಿ ಅಲ್ಲ ಎಂದೂ ಹೇಳಿದ್ದಾರೆ.
ಇದು ಯಾವುದೂ ದ್ವೈತಿಗಳ, ಅಥವಾ ಹೃಷೀಕೇಶನ ವಾಕ್ಯಗಳಲ್ಲ. ಸುಬ್ರಹ್ಮಣ್ಯ ಶಾಸ್ತ್ರಿಗಳ ವಾಕ್ಯಗಳು.
ಇದರಿಂದ ತಿಳಿಯುವ ತಥ್ಯ –
ಎಲ್ಲಾ ದೇವತೆಗಳ ಒಳಗೆ ಅಂತರ್ಯಾಮಿಯಾಗಿ ಇರುವವನು - ಎಂದು ಉಪನಿಷತ್ತು ಹೇಳುತ್ತಿರುವುದು - ಶ್ರೀಮನ್ನಾರಾಯಣನ್ನು. ಅಂದರೆ ಲಕ್ಷ್ಮೀಪತಿಯಾದ ಗುಣಪೂರ್ಣನಾದ ಮತ್ಸ್ಯಕೂರ್ಮರಾಮ ಕೃಷ್ಣಾದಿ ರೂಪ ಧರಿಸಿದ ಸಗುಣಬ್ರಹ್ಮಣನಾದ ವಿಷ್ಣುವನ್ನು. ಶ್ರೀಹರಿಯನ್ನು ಹೇಳುತ್ತಿರುವುದು. ನಿರ್ಗುಣ ಬ್ರಹ್ಮನನ್ನಲ್ಲ.
ಇದಕ್ಕೆ ಮತ್ತೊಂದು ಸರಳವಾದ ದೃಷ್ಟಾಂತವನ್ನು ನೋಡಬಹುದು. –
ದೇವತೆಗಳು ದೈತ್ಯರು ಎಲ್ಲರೂ ಸೇರಿ, ಅಮೃತಕ್ಕಾಗಿ ಸಮುದ್ರಮಥನ ಮಾಡುತ್ತಾರೆ. ಆ ಪ್ರಸಂಗವನ್ನು ವರ್ಣನೆ ಮಾಡುವಾಗ ಭಾಗವತದಲ್ಲಿ ಒಂದು ಮಾತು ಬರುತ್ತದೆ –
ತದಾಸುರಾನಾವಿಶದಾಸುರೇಣ
ರೂಪೇಣ ತೇಷಾಂ ಬಲವೀರ್ಯಮೀರಯನ್ |
ಉದ್ದೀಪಯನ್ ದೇವಗಣಾಂಶ್ಚ ವಿಷ್ಣು-
ರ್ದೇವೇನ ನಾಗೇಂದ್ರಮಬೋಧರೂಪಃ ||
ಎಂಬಲ್ಲಿ ವಿಷ್ಣುವು ಸಮುದ್ರಮಥನ ನಡೆಯುವಾಗ ದೇವತೆಗಳಲ್ಲಿ, ದೈತ್ಯರಲ್ಲಿ ತನ್ನ ರೂಪದಿಂದ ಪ್ರವೇಶಿಸಿದ ಎಂದು ಹೇಳಲಾಗಿದೆ.
ಆದರೆ ನಾರಾಯಣನ ಒಳಗೆ ಪ್ರವೇಶವನ್ನು ಹೇಳಿಲ್ಲ.
ಈ ಶ್ಲೋಕಕ್ಕೆ ಶ್ರೀಧರವ್ಯಾಖ್ಯಾನ –
ತದೇತಿ | ಆಸುರೇಣಾಸುರಾಕಾರೇಣ, ದೈವೇನ ದೇವಾಕಾರೇಣ ರೂಪೇಣ ಆವಿಶತ್ ||
……. ಇತ್ಯಾದಿ
ಇಲ್ಲಿ ದೇವತೆಗಳಲ್ಲಿ ದೇವತೆಗಳ ರೂಪದಿಂದ, ದೈತ್ಯರಲ್ಲಿ ದೈತ್ಯರೂಪದಿಂದ ಹರಿಯು ಪ್ರವೇಶಿಸಿದ, ಎಂದು ಹೇಳಲಾಗಿದೆ. ಇಲ್ಲಿ ದೇವತೆಗಳು ಎಂದರೆ ಯಾರೆಲ್ಲಾ? ಎಂಬುದನ್ನು, ಈ ಶ್ಲೋಕದ ಮುಂದೆ ಬರುವ ಶ್ಲೋಕಗಳ ಮೂಲಕ ತಿಳಿಯಬಹುದು.
ತಸ್ಥೌ ದಿವಿ ಬ್ರಹ್ಮಭವೇಂದ್ರಮುಖ್ಯೈ…..
ಹಾಗಾಗಿ ಈ ಪ್ರಸಂಗವನ್ನು ನೋಡುವಾಗ ಶ್ರೀಹರಿಯು ಅಂದರೆ ನಾರಾಯಣನು ಬ್ರಹ್ಮಾದಿ ಎಲ್ಲಾ ದೇವತೆಗಳ ಒಳಗೆ ಪ್ರವೇಶ ಮಾಡಿ ಬಲವೀರ್ಯಗಳನ್ನು ಉದ್ದೀಪನ ಮಾಡುತ್ತಾನೆ. ಅಂದರೆ ನಿಯಮನ ಮಾಡುತ್ತಾನೆ. ಅವನ ಒಳಗೆ ಯಾರೂ ನಿಯಮನ ಮಾಡುವುದಿಲ್ಲ.
ಅಂದರೆ ಅವರೊಳಗಿರುವ ಅಂತರ್ಯಾಮೀ ನಾರಾಯಣ ಎಂದಲ್ಲವೇ?
ಹಾಗಾಗಿ ದೇವತೆಗಳ ಆರಾಧನೆ ಮಾಡುವಾಗ ಸುಬ್ರಹ್ಮಣ್ಯ, ಶಿವ ಮೊದಲಾದವರ ಅಂತರ್ಯಾಮಿಯಾಗಿ ನಾರಾಯಣ ರೂಪವಿದೆ. ಅದನ್ನು ತಿಳಿದು ಪೂಜಿಸಬೇಕು.
ಅದನ್ನೇ ಮಾಧ್ವ ಅರ್ಚಕರು ಮಾಡುತ್ತಿರುವುದು. ಹಾಗಾಗಿ ಅವರ ಆಚರಣೆ ದೇವರಿಗೆ ಸೇರುವುದಿಲ್ಲ. ಎನ್ನುವುದು ಅತ್ಯಂತ ಹಾಸ್ಯಾಸ್ಪದ.
ಜೊತೆಗೆ ವೇದಾಂತಕ್ಕೆ ವಿರುದ್ಧವಾಗಿ, ಅಂತರ್ಯಾಮಿ ವಿಚಾರವನ್ನೇ ಮರೆತು ಕೃಷ್ಣಪರಮಾತ್ಮನು ಯೇಪ್ಯನ್ಯದೇವತಾ ಭಕ್ತ… ಇತ್ಯಾದಿ ಹೇಳುವಂತೆ, ಕೇವಲ ಶಿವ, ಸುಬ್ರಹ್ಮಣ್ಯ ಇತ್ಯಾದಿ ದೇವತೆಗಳನ್ನೇ ಪೂಜಿಸುವ ಪ್ರಕ್ರಿಯೆಗೆ ಏನು ಹೇಳುವುದು?
ತಾನು ತಪ್ಪು ಮಾಡಿ, ಸರಿ ಮಾಡುವ ಮತ್ತೊಬ್ಬರಿಗೆ, ನೀನು ತಪ್ಪು ಮಾಡುತ್ತಿದ್ದಿ ಎನ್ನುವ ಪ್ರವೃತ್ತಿ. ಅಷ್ಟೇ….
ನಿಜಕ್ಕೂ ಮಧ್ವಾಚಾರ್ಯರು ಹಾಕಿಕೊಟ್ಟ ಕ್ರಮ ಅದೆಂತಹ ಸುಂದರ, ಅದೆಷ್ಟು ಶಾಸ್ತ್ರೀಯ ಚೌಕಟ್ಟಿನಲ್ಲಿ ಇದೆ. ಶಾಸ್ತ್ರಾದಿಗಳ ಮಥನ ಮಾಡಿದಾಗ ಲಭ್ಯವಾಗುವ ಇಂತಹ ಅಪೂರ್ವ ಪ್ರಮೇಯವನ್ನು ಸರಳವಾಗಿ ಪ್ರತಿಯೊಬ್ಬ ವ್ಯಕ್ತಿಯೂ ನಿತ್ಯ ತಾನು ದೇವರಪೂಜೆ ಮಾಡುವಾಗ ಅಂತರ್ಯಾಮಿ ಚಿಂತನೆಯ ಜೊತೆಗೆ ಮಾಡುವಂತೆ ಮಾಡಿಕೊಟ್ಟಿದ್ದಾರೆ. ಒಂದು ರೀತಿಯಲ್ಲಿ ಸರಳವಾಗಿ ಅಮೃತವನ್ನು ಕೈಯಲ್ಲಿ ಕೊಟ್ಟಿದ್ದಾರೆ. ಕುಡಿಯುವುದು ಬಿಡುವುದು ನಮ್ಮ ಕೈಯಲ್ಲಿ ಇರುವುದು.
ಹಾಗಾಗಿ ಸುಬ್ರಹ್ಮಣ್ಯನ ಆರಾಧನೆ ಮಾಡುವಾಗ ಅವನ ಅಂತರ್ಯಾಮಿಯಾಗಿ ನಾರಾಯಣನ ರೂಪದ ಉಪಾಸನೆ ಅತ್ಯಂತ ಯೋಗ್ಯವಾದದ್ದಾಗಿದೆ. ಮಾಡಬೇಕಾದದ್ದೇ ಆಗಿದೆ. ಇದು ಶ್ರೀಕೃಷ್ಣಪರಮಾತ್ಮ ತಿಳಿಸುವಂತೆ ವಿಧಿಪೂರ್ವಕ ಪೂಜೆಯಾಗುವುದು. ದೇವರಿಗೆ ಸೇರುವುದು.
ಎಲ್ಲರೂ ಹೀಗೆಯೇ ಮಾಡಬೇಕೆಂದು ಹೇಳುವುದಿಲ್ಲ. ಹೇಗೆ ಬೇಕೋ ಹಾಗೆ ಮಾಡಿ. ಆದರೆ ಮಾಧ್ವರು ಮಾಡುವುದನ್ನು ನಿಂದಿಸುವುದು ಸರಿಯಲ್ಲ.
ಹೃಷೀಕೇಶ ಮಠದ
॥ श्रीश्रीशभक्तो जयति मध्वो विध्वस्तसाध्वसः ॥
0 Comments