Header Ads Widget

ॐ GSB Madhva Bhramins ॐ

ವಿಷ್ಣುವಿಗೆ ಸುದರ್ಶನ ಚಕ್ರ ಪ್ರಾಪ್ತಿ

 " ವಿಷ್ಣುವಿಗೆ ಸುದರ್ಶನ ಚಕ್ರ ಪ್ರಾಪ್ತಿ "



ದೈತ್ಯರು,ದೇವತೆಗಳನ್ನು,ಜನರನ್ನು ಪೀಡಿಸುತ್ತ,ಧರ್ಮದ ಲೋಪವನ್ನು ಮಾಡತೊಡಗಿದರು.ದೇವತೆಗಳು ಮಹಾವಿಷ್ಣುವಿನಲ್ಲಿ ತಮ್ಮ ಸಂಕಟ ಹೇಳಿಕೊಂಡರು.ವಿಷ್ಣುವು ಕೈಲಾಸಕ್ಕೆ ಹೋಗಿ ವಿಧಿವತ್ತಾಗಿ ಶಿವನ ಆರಾಧನೆ ಮಾಡಿ,ಸಹಸ್ರನಾಮ ಪೂಜೆಯಲ್ಲಿ,
ಪ್ರತಿನಾಮಕ್ಕೂ ಒಂದೊಂದು ಕಮಲವನ್ನು ಏರಿಸುತ್ತಿದ್ದನು.
ಶಿವನು ಅವನ ಭಕ್ತಿಯನ್ನು ಪರೀಕ್ಷಿಸಲು,
ವಿಷ್ಣುವು ತಂದಿದ್ದ ಸಾವಿರ ಕಮಲಗಳಲ್ಲಿ ಒಂದನ್ನು ಅಡಗಿಸಿಟ್ಟನು.ಶಿವನ ಮಾಯೆಯಿಂದ ಹರಿಗೆ ಇದರ ಅರಿವಾಗಲಿಲ್ಲ.
ಸಹಸ್ರನಾಮದಲ್ಲಿ ಒಂದು ನಾಮ ಉಳಿದಿದೆ,ಆದರೆ ಕಮಲ ಉಳಿದಿರದಿದ್ದುದನ್ನು ನೋಡಿ,ಒಂದು ಹೂವಿಗಾಗಿ ಇಡೀ ಪೃಥಿವಿಯನ್ನು ಸುತ್ತಿದನು.
ಆದರೂ ಎಲ್ಲಿಯೂ ಕಮಲ ಸಿಗಲಿಲ್ಲ.ಆಗ ವಿಷ್ಣುವು ಕಮಲದ ಬದಲಿಗೆ ತನ್ನ ಒಂದು ಕಣ್ಣನ್ನೇ ಕಿತ್ತು ಅರ್ಪಿಸಿದನು.ತಕ್ಷಣವೇ ಪ್ರತ್ಯಕ್ಷನಾದ ಮಹಾದೇವನು,
"ಹರಿಯೇ ನಿನ್ನ ಪೂಜೆಯಿಂದ ತೃಪ್ತನಾಗಿದ್ದೇನೆ.ಬೇಕಾದ ವರವನ್ನು ಕೇಳು" ಎಂದನು.
ನಿನ್ನ ಮುಂದೆ ನಾನೇನು ಕೇಳಲಿ.?
ಅಂತರ್ಯಾಮಿಯಾದ ನಿನಗೆ ಎಲ್ಲವೂ ತಿಳಿದಿದೆ.ದೈತ್ಯರು ಇಡೀ ಜಗತ್ತನ್ನು ಪೀಡಿಸುತ್ತಿದ್ದಾರೆ.ಅವರನ್ನು ಸಂಹರಿಸಲು,
ಈಗ ನನ್ನಲ್ಲಿರುವ ಅಸ್ತ್ರ-ಶಸ್ತ್ರಗಳು,
ಉಪಯೋಗಕ್ಕೆ ಬರುವುದಿಲ್ಲ.
ಅದಕ್ಕಾಗಿ ಒಂದು ದಿವ್ಯಾಸ್ತ್ರವನ್ನು ಕೇಳಲು ಬಂದಿದ್ದೇನೆ.ಅನುಗ್ರಹ ಮಾಡು" ಎಂದು ನಮಸ್ಕರಿಸಿದನು.
ಮಹಾದೇವನು,ತನ್ನಲ್ಲಿದ್ದ ತೇಜೋರಾಶಿಯಿಂದ,ಕೂಡಿದ್ದ,
ದಿವ್ಯಪ್ರಭೆಯುಳ್ಳ ಸುದರ್ಶನ ಚಕ್ರವನ್ನು ವಿಷ್ಣುವಿಗೆ ಕೊಟ್ಟು,
"ವಿಷ್ಣುವೇ ಈ ಚಕ್ರವನ್ನು ಧರಿಸಿ ಪ್ರತಿದಿನ ನನ್ನ ಸಹಸ್ರನಾಮಗಳನ್ನು ಸ್ತೋತ್ರಮಾಡುತ್ತಿರು.ಇದರಿಂದ ನಿನಗೆ ಶಕ್ತಿವರ್ಧನೆಯಾಗಿ,ಮನೋರಥ ಸಿದ್ಧಿಸುವುದು" ಎಂದನು.
ಅವಶ್ಯವಾಗಿ ಹಾಗೆಯೇ ಆಚರಿಸುತ್ತೇನೆ ಎಂದ ವಿಷ್ಣುವು ಶಿವನಿಗೆ ಸಾಷ್ಟಂಗ ಪ್ರಣಾಮ ಮಾಡಿ,ಚಕ್ರದೊಂದಿಗೆ ಕೈಲಾಸದಿಂದ ಹೊರಟು ಸುದರ್ಶನ ಚಕ್ರವನ್ನು ಧರಿಸಿ,
ಶಿವಹಸ್ರನಾಮವನ್ನು ಅನೇಕ ದಿನಗಳ ಪರ್ಯಂತ ಅನುಷ್ಠಾನ ಮಾಡಿದ ನಂತರ ಸುದರ್ಶನ ಚಕ್ರದಿಂದ,
ಆಯಾಸವಿಲ್ಲದೆ ಸಮಸ್ತ ದೈತ್ಯರನ್ನು ಸಂಹಾರ ಮಾಡಿದನು.ಇಡೀ ಪ್ರಪಂಚವು ನೆಮ್ಮದಿ ಪಡೆದು ದೇವತೆಗಳೂ ಸುಖಿಗಳಾದರು" ಎಂದು, ಸೂತಪುರಾಣಿಕರು ಶೌನಕಾದಿ ಋಷಿಗಳಿಗೆ ಹೇಳಿ ಅವರಿಗೆ ಮಹಾ ವಿಷ್ಣುವು ಶಿವನನ್ನು ಅರ್ಚಿಸಿದ್ದ ಶಿವಸಹಸ್ರನಾಮಾವಳಿ,
"ಶಿವೋ ಹರೋ ಮೃಡೋ ರುದ್ರಃ
ಪುಷ್ಕರಃ ಪುಷ್ಪಲೋಚನಃ |
ಅರ್ಥಿಗಮ್ಯಃ ಸದಾಚಾರಃ
ಶರ್ವಃ ಶಂಭುರ್ಮಹೇಶ್ವರಃ" ಎಂದು ಆರಂಭವಾಗುವಲ್ಲಿಂದ,
ಪರಮಾರ್ಥಗುರುರ್ದತ್ತಃ
ಸೂರಿರಾಶ್ರಿವತ್ಸಲಃ |
ಸೋಮೋ ರಸಜ್ಞೋ ರಸದಃ
ಸರ್ವಸತ್ತ್ವಾವಲಂಬನಃ ||
ಎಂಬಲ್ಲಿಯ ವರೆಗಿನ ಸಹಸ್ರನಾಮವನ್ನು ಉಪದೇಶಿಸಿ,
ಈ ಸಹಸ್ರನಾಮವನ್ನು ನಿತ್ಯವೂ ಸ್ತೋತ್ರ ಮಾಡುವವನಿಗೆ ಸ್ವಪ್ನದಲ್ಲಿಯೂ ಸಹ ದುಃಖದ ಅನುಭವವಾಗುವುದಿಲ್ಲ.
ನಿತ್ಯವೂ ಪಠಿಸುವವನಿಗೆ ಸಕಲರೋಗ ನಾಶ,ವಿದ್ಯೆ,ಸಂಪತ್ತಿನೊಂದಿಗೆ ಸಕಲ ಅಭೀಷ್ಟಗಳನ್ನು ದೊರಕಿಸಿಕೊಡುತ್ತದೆ" ಎಂದು ಹೇಳಿದರು.
103
8 Comments
Like
Comment

Post a Comment

0 Comments