Header Ads Widget

ॐ GSB Madhva Bhramins ॐ

ವೇದವ್ಯಾಸ ಜಯಂತಿ

 24-05-2021ವೈಶಾಖ ಶುದ್ಧ ದ್ವಾದಶಿ

ಸೋಮವಾರ
ವೇದವ್ಯಾಸ ಜಯಂತಿ
ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮ: ||
ಇಹಲೋಕದಲ್ಲಿಯ ಅಭಿವೃದ್ಧಿ ಸಮುನ್ನತಿಗಳಿಗೆ ಹಾಗೂ ಪರದಲ್ಲಿಯ ಶ್ರೇಯಸ್ಸಿಗೆ ಸಾಧನವಾದುದು ಧರ್ಮ. ಅದು ಭಾರತೀಯ ಸನಾತನ ಧರ್ಮ. ಕಾಲಗತಿಯಿಂದ ಧರ್ಮದ ಅವನತಿ ಅಪಚಯಗಳುಂಟಾಗಿ, ಅಧರ್ಮದ ಸಮುನ್ನತಿ ಉಪಚಯಗಳು ಸಂಭವಿಸಿದಾಗ, ಸರ್ವಸಮುದ್ಧಾರಕವಾದ ಸನಾತನಧರ್ಮದ ಸ೦ವರ್ಧನೆಗಾಗಿ, ಧರ್ಮಾನುಯಾಯಿಗಳಿಗೆ ಭವ್ಯಪಥ ಪ್ರದರ್ಶಿಸುವುದಕ್ಕಾಗಿ, ಸರ್ವಜ್ಞನೂ, ಸರ್ವಶಕ್ತನೂ ಆಗಿರುವ ಭಗವಂತನ ದಿವ್ಯಸ್ವರೂಪ ಅವತರಿಸುವುದು ಈ ಪುಣ್ಯಭೂಮಿಯ ಹಿರಿಮೆಯಷ್ಟೇ! ಕಾಲಗತಿಯಿಂದ ಖಿಲವಾಗುತ್ತ ಬ೦ದಂತಹ ಭಾರತೀಯ ಸನಾತನಧರ್ಮ, ಉನ್ನತ-ಆಧ್ಯಾತ್ಮಿಕ ಸಂಪ್ರದಾಯ, ಪರಂಪರೆ ಇವುಗಳನ್ನು ಅಪೌರುಷೇಯಗಳಾದ ವೇದಗಳ ತಾತ್ತ್ವಿಕ ನೈಜ ತಳಹದಿಯಲ್ಲಿ ಸುಭದ್ರಗೊಳಿಸಲು ಅವತರಿಸಿದ ಪರಮಾತ್ಮ ಮಹರ್ಷಿ ವೇದವ್ಯಾಸರ ರೂಪದಲಿ.....
ಸತ್ಯವತೀ-ಪರಾಶರ ಸುತ
ಮಹರ್ಷಿ ವ್ಯಾಸರು ಸಾಕ್ಷಾತ್ ವಿಷ್ಣುಸ್ವರೂಪಿ ವೇದನಿಧಿಗಳೂ, ತಪೋನಿಧಿಗಳೂ ಹಾಗೂ ತತ್ತ್ವನಿಧಿಗಳು. ಬ್ರಹ್ಮರ್ಷಿಶ್ರೇಷ್ಠರಾದ ವಸಿಷ್ಠರ ಪ್ರಪೌತ್ರರು (ಮರಿಮಗ) ಶಕ್ತಿಮಹರ್ಷಿಗಳ ಪೌತ್ರರು (ಮೊಮ್ಮಗ) ಹಾಗೂ ಪರಾಶರರ ಪುತ್ರರು.
ಮಹರ್ಷಿ ವ್ಯಾಸರ ಜನನಿ ಸತ್ಯವತೀ. (ಇವಳ ತ೦ದೆ ಉಪರಿಚರವಸು) ತಾಯಿ ಶಾಪವಶದಿಂದ ಮೀನಿನರೂಪಧರಿಸಿದ ‘ಅದ್ರಿಕಾ’ ಎಂಬ ಅಪ್ಸರೆ. ದಾಶರಾಜ ಸತ್ಯವತಿಯ (ಮತ್ಸ್ಯಗ೦ಧಿಯ) ಸಾಕುತ೦ದೆ.
ಕೃಷ್ಣದ್ವೈಪಾಯನ
ಮಹರ್ಷಿಪರಾಶರ ಹಾಗೂ ಸತ್ಯವತೀ ಇವರೀರ್ವರ ಸಮಾಗಮ ನದಿಯ ದ್ವೀಪದ ಅಯನವೊ೦ದರಲ್ಲಿ ಸ೦ಘಟಿಸಿ, ಸದ್ಯೋಗರ್ಭಸ೦ಭವ ಮತ್ತು ವ್ಯಾಸರ ಪ್ರಾದುರ್ಭಾವ. ಆದಕಾರಣ ವ್ಯಾಸರು ದ್ವೈಪಾಯನರು. ಕೃಷ್ಣವರ್ಣದವರಾದ ಅವರಿಗೆ ‘ಕೃಷ್ಣದ್ವೈಪಾಯನ’ ಎಂಬುದು ಅನ್ವರ್ಥಕ ಶುಭನಾಮ. (ತಾಯಿಯಾದ ಸತ್ಯವತಿಯ ಕನ್ಯಾಧರ್ಮವು ಲುಪ್ತವಾಗದ೦ತೆ, ತ೦ದೆಯಾದ ಪರಾಶರಮಹರ್ಷಿಗಳಿಗೆ ಸರಿ ಮಿಗಿಲಾಗಿ ಅದ್ಭುತಶಕ್ತಿಸ೦ಪನ್ನರಾಗಿ ಪ್ರಾದುರ್ಭವಿಸಿದವರು ವ್ಯಾಸರು ಎ೦ಬುದು ಗಮನಾರ್ಹವಾಗಿದೆ.)
ಬಾದರಾಯಣ
ಪರಾಶರ್ಯರಾದ ವ್ಯಾಸರು ಜನಿಸುವಾಗಲೆ ಅವರು ದ೦ಡ, ಕಮ೦ಡಲ, ಜಟಾದಿಗಳಿ೦ದ ಸುಶೋಭಿತರಾಗಿ, ಸರ್ವಜ್ಞತ್ವಾದಿಗುಣಗಳಿ೦ದ ವಿಭೂಷಿತರಾಗಿ ಅವತರಿಸಿದ್ದರು. ಸ್ಮರಿಸಿದಾಗ ಬ೦ದು ಸೇವಿಸುವುದಾಗಿ ಜನನಿಗೆ ವಚನವನ್ನಿತ್ತು ಜನಕರಿ೦ದ ಬೀಳ್ಕೊ೦ಡು ಬದರಿಕಾಶ್ರಮಕ್ಕೆ ಪ್ರಸ್ಥಾನ ಬೆಳೆಸಿದ ವ್ಯಾಸರು ಅಲ್ಲಿ ತಮಗೊಂದು ಆಶ್ರಮವನ್ನು ಕಲ್ಪಿಸಿಕೊ೦ಡು ವಾಸ್ತವ್ಯ ಮಾಡಿ ತಪಸ್ಸು, ಅನುಷ್ಠಾನಾದಿಗಳಲ್ಲಿ ನಿರತರಾದರು. ಬದರಿಯು ಅವರ ವಸತಿಯ ಅಯನ(ಸ್ಥಾವರ)ವಾದ ಕಾರಣ ಮಹರ್ಷಿ ವ್ಯಾಸರು ‘ಬಾದರಾಯಣ’ ಎಂದು ಪ್ರಸಿದ್ಧರಾದರು.
ವೇದವ್ಯಾಸ
ದ್ವಾಪರಯುಗದಲ್ಲಿ ಜ್ಞಾನಪ್ರಕಾಶವು ಕಡಿಮೆಯಾಗತೊಡಗಿದಾಗ, ಲೋಕದ ಜನತೆಯನ್ನು ವೈದಿಕ ಜ್ಞಾನದ ಬೆಳಕಿನಲ್ಲಿ ಮುನ್ನಡೆಸಲು ಬ್ರಹ್ಮಾದಿದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿದ ಭಗವಾನ್ ವಿಷ್ಣುವು ಮಹರ್ಷಿ ವ್ಯಾಸರೂಪದಲ್ಲಿ ಧರೆಗೆ ಇಳಿದುಬಂದ. ಅಪಾರವೂ, ಅನಂತವೂ ಮತ್ತು ಅಪೌರುಷೇಯವೂ ಆದ ವೇದರಾಶಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿದ ವ್ಯಾಸರು, ವೇದಗಳನ್ನು ನಾಲ್ಕು ಶಾಖೆಗಳಲ್ಲಿ ವಿ೦ಗಡಿಸಿ, ಅವುಗಳಿಗೆ ಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ಅಭಿಧಾನಪ್ರದಾನ ಮಾಡಿ, ವೈದಿಕ ಸಾಹಿತ್ಯದ ಸುಗಮ ಅಧ್ಯಯನಕ್ಕೆ ಆನುಕೂಲ್ಯವನ್ನು ಕಲ್ಪಿಸಿದರು. ಒಂದಾಗಿದ್ದ ವೇದರಾಶಿಯನ್ನು ಈ ರೀತಿ ನಾಲ್ಕಾಗಿ ವಿಭಾಗಿಸಿದ (ಅಭಿಧಾನಪ್ರದಾನ ಮಾಡಿದಕಾರಣ) (ವೇದ೦-ವ್ಯಸ್ಯತಿ=ಪೃಥಕ್-ಕರೋತಿ) ವ್ಯಾಸರು ‘ವೇದವ್ಯಾಸರು’ ಎಂಬ ಸಾರ್ಥಕ ನಾಮವನ್ನು ತಮ್ಮದಾಗಿಸಿಕೊಂಡರು.
ದ್ವಾಪರೇ ದ್ವಾಪರೇ ವಿಷ್ಣುಃ ವ್ಯಾಸರೂಪೀ ಮಹಾಮುನೇ |
ವೇದಮೇಕಂ ಸ ಬಹುಧಾ ಕುರುತೇ ಜಗತೋ ಹಿತಂ||
ಮಹಾಭಾರತ ನಿರ್ಮಾತಾ
ವೇದಗಳಲ್ಲಿ ಪ್ರತಿಪಾದಿತವಾದ ತತ್ತ್ವಗಳನ್ನು ಪ೦ಡಿತರು ಮಾತ್ರ ಅರಿತುಕೊಳ್ಳಲು ಸಾಧ್ಯ. ಪಾಮರರಾದ ಲೋಕದ ಸಾಮಾನ್ಯ ಜನರಿಗೆ ಇವುಗಳನ್ನು ತಿಳಿದು ತಮ್ಮ ಆತ್ಮೋನ್ನತಿಯನ್ನು ಸಾಧಿಸಿಕೊಳ್ಳುವುದು ಶಕ್ಯವಾಗಲಾರದು. ಆದ್ದರಿ೦ದಲೇ ಇತಿಹಾಸ ಪುರಾಣ ಪುಣ್ಯಕಥೆಗಳ ಮೂಲಕ ಉದಾಹರಣ, ದೃಷ್ಟಾ೦ತಗಳ ನೆರವಿನಿ೦ದ, ವೇದಾರ್ಥಗಳನ್ನು ವಿಸ್ತರಿಸಿ ಹೇಳಬೇಕು- ಎ೦ಬುದು ಪ್ರಾಜ್ಞರ ಹೃದ್ಗತ. ಜನತೆಗೆ ‘ಯತೋ ಧರ್ಮಃ ತತೊ ಜಯಃ’ ಎ೦ಬ ನೀತಿಯನ್ನು ಮನವರಿಕೆ ಮಾಡಿಕೊಡಬೇಕೆ೦ಬುದು ವ್ಯಾಸರ ಅಭಿಮತ. ಈ ಉಭಯ ಸದಾಶಯಗಳ ಪೂರ್ತಿಗಾಗಿ ಮಹರ್ಷಿ ವೇದವ್ಯಾಸರು ವಿರಚಿಸಿದ ಐತಿಹಾಸಿಕ ಮಹಾಕಾವ್ಯ – ಪಂಚಮವೇದವೆಂದು ಪ್ರಸಿದ್ಧವಾದ – ಮಹಾಭಾರತ.
ವೇದವ್ಯಾಸರು ವೇದವಿದ್ಯೆಯನ್ನು ಮಹಾಭಾರತ ಮೂಲಕ ಜಗತ್ತಿಗೆ ಸಾರಿದರು.ಆದುದರಿಂದ ವೈದಿಕ ಸಾಹಿತ್ಯವನ್ನು, ಅದರಲ್ಲೂ ಮುಖ್ಯವಾಗಿ ಪುರಾಣಗಳನ್ನು ಪ್ರವಚನ ಮಾಡುವುದಕ್ಕೆ ಮೊದಲು ವ್ಯಾಸರಿಗೆ ವಂದಿಸುತ್ತಾರೆ. ಶುಕಮುನಿಗಳು ವ್ಯಾಸರ ಪುತ್ರ. ವೈಶಂಪಾಯನರೇ ಮೊದಲಾದ ಋಷಿಗಳು ವೇದದ ವಿವಿಧ ಶಾಖೆಗಳನ್ನು ಅವರ ಬಳಿ ಶಿಷ್ಯವೃತ್ತಿಮಾಡಿ ಕಲಿತರು. ವ್ಯಾಸರು ಮಹಾಕಾವ್ಯವಾದ ಮಹಾಭಾರತದ ಮತ್ತು ಲೋಕೋತ್ತರ ಸಾಹಿತ್ಯವಾದ ಭಾಗವತದ ಕರ್ತೃಗಳು. ವೇದಾಂತ ಸೂತ್ರ ಅಥವಾ ಬಾದರಾಯಣ ಸೂತ್ರಗಳೆಂದು ಪ್ರಸಿದ್ಧವಾದ ಬ್ರಹ್ಮಸೂತ್ರಗಳನ್ನು ಸಂಕಲಿಸಿದವರು ಇವರೇ. ಗ್ರಂಥಕರ್ತರಾದ ಋಷಿಗಳಲ್ಲೆಲ್ಲ ಇವರೇ ಅತ್ಯಂತ ಗೌರವಾನ್ವಿತ ಗುರುಗಳು.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ವೇದಾಗಮ, ಪುರಾಣ, ಶಾಸ್ತ್ರಾದಿಗಳೆಲ್ಲವೂ ಶ್ರೀಗುರುವಿನ ಅಪಾರವಾದ ಮಹಿಮೆಯನ್ನು ಕೊಂಡಾಡಿವೆ. ಭಗವಾನ್ ಶ್ರೀವೇದವ್ಯಾಸರು ಪ್ರಾತಃಸ್ಮರಣೀಯರಾದ ವಸಿಷ್ಠ ಮಹರ್ಷಿಗಳ ವಂಶದಲ್ಲಿ ಜನಿಸಿದವರು. ಅಂತಹ ಪವಿತ್ರ ಕುಲದಲ್ಲಿ ಜನಿಸಿ ಭಾರತ ವರ್ಷವನ್ನೇ ಪುನೀತಗೊಳಿಸಿದ ಮಹನೀಯರು ಈ ವೇದವ್ಯಾಸರು.
ವ್ಯಾಸಂ ವಸಿಷ್ಠನಪ್ತಾರಂ ಶಕ್ತೇ: ಪೌತ್ರಮಕಲ್ಮಷಂ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಂ ||
ಲೋಕಾಃ ಸಮಸ್ತಾಃ ಸುಖಿನೋ ಭವಂತು.
ಸಂಗ್ರಹ ..ಪ್ರಶಾಂತ್ ಭಟ್
ಕೋಟೇಶ್ವರ
May be an image of 1 person
YogiBriged PrasadKamat, Govind U Nayak and 48 others
15 Comments
20 Shares
Like
Comment
Share

Post a Comment

0 Comments