25-05-2021
ಮಂಗಳವಾರ
*ವೈಶಾಖ ಶುದ್ಧ ಚತುರ್ದಶಿ
ನರಸಿಂಹ ಜಯಂತಿ*
ಉಗ್ರಂ ವೀರಂ ಮಹಾವಿಷ್ಣುಂ
ಜ್ವಲಂತಂ ಸರ್ವತೋಮುಖಂ
ನೃಸಿಂಹಂ ಭೀಷಣಂ ಭದ್ರಂ
ಮೃತ್ಯುಂ ಮೃತ್ಯುಂ ನಮಾಮ್ಯಹಂ||
ಹಿರಣ್ಯಕಶಿಪುವಿನ ಪುತ್ರನಾದ ಪ್ರಹ್ಲಾದನಿಗೂ ನಡೆಯುವ ಸಂಭಾಷಣೆ.
"ನಿನ್ನ ಹರಿ ಎಲ್ಲಿರುವನು?"
"ನನ್ನ ಹರಿ ಎಲ್ಲೆಲ್ಲಿಯೂ ಇರುವನು. ನಿನ್ನಲ್ಲಿಯೂ ನನ್ನಲ್ಲಿಯೂ"
"ಈ ಕಂಬದಲ್ಲಿರುವನೇ?"
"ಕಂಬದಲ್ಲಿ, ಕಂಬದ ಕಣದಲ್ಲಿಯೂ"
ಕಶ್ಯಪ ಪುತ್ರ ಹಿರಣ್ಯಕಶಿಪು ಪ್ರಹ್ಲಾದನಲ್ಲಿ ಹರಿಯ ಬಗ್ಗೆ ವಿಚಾರಿಸುವಾಗ ಪುಟ್ಟ ಹುಡುಗ ಪ್ರಹ್ಲಾದ ಹೇಳುವ ಮಾತಿದು. ನೃಸಿಂಹಾವತಾರ ಇಲ್ಲಿಯೇ ಸಂಭವಿಸುವುದು.
ದೇವರನ್ನು ವೇದಗಳು ಸರ್ವಾಂತರ್ಯಾಮಿ, ಸರ್ವಶಕ್ತ, ಸರ್ವೇಶ್ವರ ಎಂದು ಸಾರುತ್ತವೆ. ಎಲ್ಲಾ ಕಾಲಕ್ಕೂ ಎಲ್ಲೆಲ್ಲಿಯೂ ಇರುವ ಮಹತ್ ತತ್ವ ಭಗವಂತ. ಅವನ ಇರುವಿಕೆ ಪರಿಪೂರ್ಣ. ಸರ್ವಕಾಲಕ್ಕೂ ಎಲ್ಲೆಡೆ ಇರಬಹುದಾದ ಭಗವಂತನ ನಿದರ್ಶನ ರೂಪವನ್ನು ತೋರುವುದು ಈ ನಾರಸಿಂಹನ ರೂಪ.
"ಹಿರಣ್ಯಕಶಿಪು" ಮಹರ್ಷಿ ಕಶ್ಯಪರ ಪುತ್ರನೇ ಆದರೂ ತನ್ನ ಮನಸ್ಸೇಂದ್ರಿಯಗಳನ್ನು ಭಗವಂತನಲ್ಲಿ ನಿಲ್ಲಿಸದೆ ಅಹಂಕಾರದಿಂದ ತಾನೇ ಸರ್ವಶಕ್ತ ಎನ್ನುವಂತೆ ವರ್ತಿಸುತ್ತಾನೆ. ತನ್ನೊಳಗಿನ ದೈವತ್ವವನ್ನು ಅರಿಯದೆ ಕಾಮ ಕ್ರೋಧಾದಿಗಳನ್ನು ಬೆಳೆಸಿಕೊಂಡು ದೈತ್ಯನಾಗುತ್ತಾನೆ. ಆ ದೈತ್ಯತ್ವವನ್ನು ಸಂಹರಿಸಲು ಮಹಾವಿಷ್ಣುವಿನ ಅವತಾರವಾಗಬೇಕಾಗುತ್ತದೆ.
ಪ್ರಹ್ಲಾದ ದೈತ್ಯಪುತ್ರನಾದರೂ ಸಹ ತನ್ನೊಳಗೆ ಸದಾ ಹರಿಭಕ್ತಿ, ವೈರಾಗ್ಯವೆನ್ನುವ ಸಾತ್ವಿಕ ಮನೋಗುಣವನ್ನು
ನಿಷ್ಕಾಮ ವ್ರತವನ್ನು ಬೆಳೆಸಿಕೊಂಡು ಬರುತ್ತಾನೆ ಸಾಕ್ಷಾತ್ ಶ್ರೀ ಹರಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.
ಇದು ನಾರಸಿಂಹ ತತ್ವದ ಮತ್ತೊಂದು ಸಂದೇಶ, ಮನುಷ್ಯನ ಹುಟ್ಟಿಗಿಂತಲೂ ಆತನ ಸಂಸ್ಕಾರ, ಸದ್ವಿಚಾರಗಳು, ನಿಷ್ಕಾಮ ವ್ರತ ಆತನನ್ನು ಭಗವಂತನಿಗೆ ಬಹಳ ಹತ್ತಿರದವನನ್ನಾಗಿ ಮಾಡುತ್ತದೆ.
ಭಗವಂತನ ಅನುಗ್ರಹ,ಪ್ರೀತಿಗೋಸ್ಕರ ಮಾಡುವ ವ್ರತ ನಿಷ್ಕಾಮ ವ್ರತ. ಇಲ್ಲಿ ವ್ರತ ಮಾಡುವವರು ಭಗವಂತನ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನ ಪ್ರಹಲ್ಲಾದನ ವ್ರತ. ತನ್ನ ಮುಂದೆ ಪ್ರತ್ಯಕ್ಷನಾದ ಭಗವಂತ ನಿನಗೇನೂ ಬೇಕು ಎಂದು ಕೇಳಿದಾಗ ಆ ಪುಟ್ಟ ಬಾಲಕ 'ನಾನು ನಿನ್ನನ್ನು ಭಕ್ತಿ ಮಾಡಿದ್ದು ನಿನ್ನಿಂದ ಪ್ರತಿಫಲಪಡೆಯುವುದಕ್ಕಾಗಿ ಅಲ್ಲ, ನನ್ನ ಭಕ್ತಿ ವ್ಯಾಪಾರವಲ್ಲ ಎನ್ನುತ್ತಾನೆ'!..
ಸೃಷ್ಟಿ-ಸ್ಥಿತಿ-ಸಂಹಾರ ಭಗವಂತನ ನಿಷ್ಕಾಮ ವ್ರತ. ರಾಮಾಯಣದಲ್ಲಿ ಶ್ರೀರಾಮಚಂದ್ರ ಹೇಳುವಂತೆ "*ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮಃ*" ಅಂದರೆ 'ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ವ್ರತ'.
ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
*ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ*
*ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್*
ಅಂದರೆ ' ಬೇರೆಲ್ಲಾ ತೊರೆದು ನನ್ನನ್ನೇ ನೆನೆಯುತ್ತ ಪರಿಪರಿಯಿಂದ ಪೂಜಿಸುವ (ನಿತ್ಯ ನಿಷ್ಕಾಮ ಕರ್ಮ) ಜನರ, ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರ ಯೋಗ-ಕ್ಷೇಮದ ಹೊಣೆ ನನ್ನದು'..
ಪ್ರಶಾಂತ್ ಭಟ್ ಕೋಟೇಶ್ವರ
0 Comments