ಕುರುಕ್ಷೇತ್ರದಿಂದ ಉಡುಪಿಗೆ
ಬರಹ:ಪಿ.ಲಾತವ್ಯ ಆಚಾರ್ಯ.ಉಡುಪಿ.
1978 ರ ಇಸವಿ.ಆಗಿನ್ನೂ ಐದನೇ ತರಗತಿಯಲ್ಲಿ ಓದುತ್ತಿದ್ದೆ.ತಂದೆ ವಿಠಲ ಆಚಾರ್ಯರು ಒಬ್ಬರೇ ಕುಳಿತು ಮಠದ ಚಾವಡಿಯಲ್ಲಿ ಭಾಗವತ ಪಾರಾಯಣ ನಡೆಸುತ್ತಿದ್ದರು.
ಆಸಮಯದಲ್ಲಿ ಅವರ ಪುಸ್ತಕದ ಎಡೆಯಿಂದ ಹಳೆಯ ಕಾಗದ ಪತ್ರವೊಂದು ಕೆಳಗೆ ಜಾರಿತು.ಆಕಾಗದ ದಲ್ಲಿ ವಿಶಿಷ್ಟ ಚಿತ್ರವೊಂದನ್ನು ರಚಿಸಲಾಗಿತ್ತು.ತುಂಬಾ ಹಳೆಯ ಕಾಗದ ಪತ್ರ ಅದು.ಅಲ್ಲಲ್ಲಿ ಮಡಚಿ ಹರಿದು ತೂತಾಗಿತ್ತು.
ಯಾವುದೋ ಸೇನಾನಿಯ ಮುಖರಚನೆಯನ್ನು ಆಚಿತ್ರ ಹೋಲುತ್ತಿತ್ತು.
ಕುತೂಹಲ ತಡೆಯಲಾರದೆ ಅಪ್ಪಯ್ಯನೊಡನೆ ಆಚಿತ್ರದ ಕುರಿತಾಗಿ ಕೇಳಿದೆ.ಅಪ್ಪಯ್ಯನವರು ಪಾರಾಯಣವನ್ನು ಮುಗಿಸಿ ಆಚಿತ್ರದ ನೈಜ ಕಥೆ ಆರಂಭಿಸಿದರು..
ಉಡುಪಿ ಶ್ರೀಶಿರೂರು ಮಠದ ಶ್ರೀಲಕ್ಷ್ಮೀ0ದ್ರತೀರ್ಥರ ದ್ವಿತೀಯ ಪರ್ಯಾಯದ ಸಂದರ್ಭ.1947 ನೇ ಇಸವಿ ಜನವರಿ ತಿಂಗಳು.
ದೇಶಕ್ಕೆ ಇನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ.ಆರು ದಿನಗಳ ಸಂಕ್ರಮಣ ರಥೋತ್ಸವ ಮುಗಿದು 7ನೇ ದಿನ ಜರಗುವ ಸ್ವರ್ಣೋತ್ಸವ ಅಂದರೆ ಹಗಲು ತೇರಿನ ಉತ್ಸವ ಆಗಷ್ಟೇ ಮುಗಿದಿತ್ತು.
ರಥಬೀದಿ ಕೃಷ್ಣಮಠ ರಾಜಾಂಗಣದಲ್ಲಿ ವಿಪರೀತ ನೂಕುನುಗ್ಗಲು.
ಆದಿನಗಳಲ್ಲಿ ಹಗಲು ತೇರಿನ ಉತ್ಸವದಂದು ಜರಗುವ ಪ್ರಸಾದ ಸ್ವೀಕರಿಸಲು ನಾಡಿನೆಲ್ಲೆಡೆಯಿಂದ ಭಕ್ತರು ಆಗಮಿಸುತ್ತಿದ್ದರು.
ಭೋಜನ ಪ್ರಸಾದಕ್ಕೆ ಜನಜಂಗುಳಿ ಹೇಗಿರುತ್ತಿದ್ದೆಂದರೆ ಕೃಷ್ಣ ಮಠದ ಭೋಜನಶಾಲೆ, ವಸಂತ ಮಹಲ್, ರಾಜಾಂಗಣ,ಅನಂತೇಶ್ವರ,ಚಂದ್ರಮೌಳೀಶ್ವರ ದೇವಾಲಯ ಹಾಗೂ ಕೆಲವು ಮಠಗಳಲ್ಲೂ ಕೂಡಾ ಭೋಜನ ಪ್ರಸಾದಕ್ಕೆ ಭಕ್ತರು ಸಾಲುಗಟ್ಟಿ ಕಾಯುತ್ತಿದ್ದರು.ಹಗಲು ತೇರಿನ ಉತ್ಸವದ ಪ್ರಸಾದಕ್ಕೆ ಇಷ್ಟೊಂದು ಮಹತ್ವ.
ಏಕೆಂದರೆ ಅಂದು ಹಗಲು ಉತ್ಸವ ಮುಗಿದ ತಕ್ಷಣ ಕೃಷ್ಣದೇವರ ಉತ್ಸವ ಪ್ರತಿಮೆಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿರಿಸಿ ಕೃಷ್ಣ ಮಠದ ಅಡುಗೆ ಶಾಲೆಗೆ ಕರೆತರಲಾಗುವುದು.
ಅಲ್ಲಿ ಸ್ವತಃ ಪರ್ಯಾಯ ಮಠದ ಯತಿಗಳೇ ಕೃಷ್ಣ ಮುಖ್ಯಪ್ರಾಣದೇವರ ತೀರ್ಥ ನಿರ್ಮಾಲ್ಯಗಳನ್ನು ಆರು ಅಡಿ ಎತ್ತರದ ಬೃಹತ್ ಪಲ್ಲದಲ್ಲಿ ಸಿದ್ಧಪಡಿಸಿರುವ ಅನ್ನದ ರಾಶಿಗೆ ಮತ್ತು
ಸಿದ್ದಪಡಿಸಿರುವ ಅಷ್ಟೂ ಪದಾರ್ಥಗಳಿಗೆ ಪ್ರೋಕ್ಷಿಸುವರು.
ತದನಂತರ ದ್ವಾಪರ ಯುಗದಲ್ಲಿ ದ್ರೌಪದಿ ದೇವಿಗೆ ಶ್ರೀಕೃಷ್ಣನು ಅನುಗ್ರಹಿಸಿರುವ ಎಂಬ ಐತಿಹ್ಯವಿರುವ ಅಕ್ಷಯ ಪಾತ್ರೆ ಹಾಗೂ ಸಟ್ಟುಗವನ್ನು ಅನ್ನದ ರಾಶಿಯ ಮೇಲಿರಿಸಲಾಗುವುದು.
ಅನ್ನದಲ್ಲಿ ಸನ್ನಿಹಿತನಾಗಿರುವ ಅನ್ನಬ್ರಹ್ಮನನ್ನು ಪ್ರಾರ್ಥಿಸಿ ಮಂಗಳಾರತಿ ಬೆಳಗುವರು.ಇಂತಹ ವಿಶಿಷ್ಟ ಪೌರಾಣಿಕ ಮಹಾತ್ಮೆ ಹಾಗೂ ಪಾವಿತ್ರ್ಯತೆ ಆದಿನದ ಪ್ರಸಾದಕ್ಕೆ ಇರುವ ಕಾರಣ ಹಗಲು ತೇರು ಉತ್ಸವದಂದು ಜರಗುವ ಊಟಕ್ಕೆ 30 ರಿಂದ 40 ಸಾವಿರ ಭಕ್ತರು ಆಗಮಿಸುತ್ತಿದ್ದರು.
ಈ ಸಂದರ್ಭದಲ್ಲಿ ಒಂದು ವಿಶಿಷ್ಟ ಘಟನೆ ಜರಗಿತು.
ಅದೇನೆಂದರೆ ಪರ್ಯಾಯ ಶ್ರೀಗಳಾದ ಶ್ರೀಲಕ್ಷ್ಮೀ0ದ್ರ ತೀರ್ಥರು ಮಧ್ಯಾಹ್ನದ ತೀರ್ಥಪ್ರಸಾದಕ್ಕಾಗಿ ವಸಂತ ಮಹಲಿನಿಂದ ಆಗಮಿಸುತ್ತಿದ್ದರು.ಆವಾಗ ಕೆಲಭಕ್ತರು ಶ್ರೀಗಳೇ ಸ್ವಲ್ಪ ತೀರ್ಥ ನೀಡಿ ಎಂದು ಕೇಳಿಕೊಂಡಾಗ ಶ್ರೀಪಾದರು ತಮ್ಮ ಕೈಲಿದ್ದ ಗಿಂಡಿಯಿಂದ ತೀರ್ಥ ನೀಡುತ್ತಿದ್ದಂತೆ ಅನಿರೀಕ್ಷಿತ ಜನಸಂದಣಿ ಆರಂಭವಾಯಿತು.
ಆಗುಂಪಿನಲ್ಲಿದ್ದ ಅನೇಕರಲ್ಲಿ ಎತ್ತರದ ಒಬ್ಬಾತ ಶ್ರೀಪಾದರಲ್ಲಿ ತೀರ್ಥಕ್ಕಾಗಿ ಕೈಚಾಚಿದ.ಆತನನ್ನು ನೋಡುತ್ತಿದ್ದಂತೆಯೇ ಶ್ರೀಪಾದರು ಒಂದು ಕ್ಷಣ ದಂಗಾದರು.ದಿಟ್ಟಿಸುತ್ತಾ ಹಾಗೆಯೇ ನಿಂತು ಬಿಟ್ಟರು.ಮೈ ಪೂರ್ತಿ ಬಟ್ಟೆ ಹೊದ್ದುಕೊಂಡಿದ್ದ ಆಜಾನುಬಾಹು ವ್ಯಕ್ತಿ ತೀರ್ಥ ಪಡೆದುಕೊಂಡು ಗುಂಪಿನ ನಡುವಲ್ಲೇ ಮುಂದೆ ಸಾಗಿದ.ಆತನನ್ನೇ ಎವೆಯಿಕ್ಕದೆ ದಿಟ್ಟಿಸುತ್ತಿದ್ದ ಶ್ರೀಪಾದರಿಗೆ ತಲೆ ಸುತ್ತು ಬಂದಾಂತಾಗಿತ್ತು.
ತಕ್ಷಣ ಸಾವರಿಸಿಕೊಂಡ ಶ್ರೀಪಾದರು ತೀರ್ಥ ಪ್ರಸಾದಕ್ಕಾಗಿ ತೆರಳಿದರು.
ಆವ್ಯಕ್ತಿಯನ್ನೂ ಕಂಡ ಕ್ಷಣದಿಂದ ಶ್ರೀಪಾದರ ಮನಸ್ಸು ಚಡಪಡಿಸುತ್ತಿತ್ತು. ಮಧ್ಯಾಹ್ನದ ಪ್ರಸಾದ ಸ್ವೀಕರಿಸುತ್ತಿರುವಾಗಲೂ ಕೂಡಾ ತಾವು ಕಂಡ ಆಜಾನುಬಾಹು ವ್ಯಕ್ತಿಯ ಚಿತ್ರ ಅವರ ಮನದಲ್ಲಿ ಪುನಃ ಪುನಃ ಪ್ರತ್ಯಕ್ಷವಾಗಿ ಮರೆಯಾಗುತ್ತಿತ್ತು. ಸುಮಾರು ಆರೂವರೆ ಅಡಿ ಎತ್ತರ,ಹಣೆಯಲ್ಲಿ ಆಳವಾದ ಗಾಯ.
ಗುಳಿಬಿದ್ದ ದುಂಡಗಿನ ಕಣ್ಣುಗಳಲ್ಲಿ ಅದೇನೋ ವಿಚಿತ್ರ ಸೆಳೆತ.ತಲೆಯ ಮೇಲೆ ಹಾವಿನಂತೆ ಸುತ್ತಿಕೊಂಡಿರುವ ಕೆಂಚು ಕೆಂಚಾದ ಜಟೆ.ಎಲ್ಲೋ ಕೇಳಿದ ನೆನಪು..
ತೀರ್ಥ ಪ್ರಸಾದ ಮುಗಿಯುತ್ತಿದ್ದಂತೆ ಶ್ರೀಪಾದರಿಗೆ ತಕ್ಷಣ ನೆನಪಿಗೆ ಬಂದಿತು.ವಿಚಾರ ತಿಳಿಯಿತು.
ತಡಮಾಡಲಿಲ್ಲ ಆಕೂಡಲೇ ಶ್ರೀಪಾದರು ನನ್ನ ತಂದೆ ವಿಠಲ ಆಚಾರ್ಯರನ್ನು ಹಾಗೂ ಇನ್ನೊಬ್ಬ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಊಟ ನಡೆಯುತ್ತಿದ್ದ ಪ್ರತಿಯೊಂದು ಸ್ಥಳವನ್ನು ಕಣ್ಣಲಿ ಕಣ್ಣಿಟ್ಟು ನೋಡಲಾರಂಭಿಸಿದರು.
ಬಹಳ ಹೊತ್ತಿನ ನಂತರ ಗೋಶಾಲೆಯ ಮುಂಭಾಗದ ಮೂಲೆಯಲ್ಲಿ ಭಕ್ತರೊಡನೆ ಪ್ರಸಾದ ಸೇವಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಶ್ರೀಪಾದರು ನೋಡುತ್ತಿದ್ದಂತೆಯೇ ಆತನನ್ನು ಕರೆದುಕೊಂಡು ಬರುವಂತೆ ಸೂಚಿಸಿದರು.
ಗ್ರಹಚಾರವಶಾತ್ ಅದೇ ಹೊತ್ತಿಗೆ ಸರಿಯಾಗಿ ಅಲ್ಲಿ ಕುಳಿತಿದ್ದ ನೂರಾರು ಮಂದಿ ಊಟ ಮುಗಿಸಿ
ಕೈತೊಳೆಯಲೆಂದು ಎದ್ದೇ ಬಿಟ್ಟರು.ನನ್ನ ತಂದೆ ಮತ್ತು ಇನ್ನೋರ್ವ ಸಿಬಂದಿ ಇಬ್ಬರೂ ಸೇರಿ ಆಗುಂಪಿನ ನಡುವೆ ಆಜಾನುಬಾಹು ವ್ಯಕ್ತಿಯನ್ನು ಹುಡುಕಲು ನಡೆಸಿದ ಭಗೀರಥ ಪ್ರಯತ್ನ ಫಲಿಸಲೇ ಇಲ್ಲ. ದೂರದಲ್ಲಿ ನಿಂತಿದ್ದ ಶ್ರೀಗಳು ಆತುರ ತಡೆಯಲಾರದೆ ಸ್ವತಃ ತಾವೇ ಗುಂಪಿನ ನಡುವೆ ಬಂದು ಆವ್ಯಕ್ತಿಯನ್ನು ಹುಡುಕಲು ಆರಂಭಿಸಿದರು.ಏನು ಮಾಡಿದರೂ ಆತನ ಪತ್ತೆಯೇ ಇಲ್ಲ.ಊಟಕ್ಕೆ ಬಂದಿದ್ದ ಭಕ್ತರು ಶ್ರೀಪಾದರ ಮುಖದಲ್ಲಿ ಮೂಡಿದ ಆತಂಕ ಕಂಡು ಗಲಿಬಿಲಿಗೊಂಡರು.ಕಣ್ಣು ಮಿಟುಕಿಸುವಷ್ಟರಲ್ಲಿ ಮಿಂಚಿನಂತೆ ಮರೆಯಾದ ವ್ಯಕ್ತಿ ಯಾರಿರಬಹುದು ಎಂಬ ಆಲೋಚನೆಗಳು ನಮ್ಮೆಲ್ಲರ ತಲೆಯಲ್ಲಿ ಓಡಲಾರಂಭಿಸಿತು.
ಶ್ರೀಪಾದರಿಗಂತೂ ತೀವ್ರ ನಿರಾಸೆಯಾಯಿತು.
ದುಃಖವೂ ಆಯಿತು.
ಆದರೂ ಅವರ ಕಣ್ಣುಗಳು ಗುಂಪಿನ ನಡುವೆಯೇ ಮಾಯವಾದ ಆಜಾನುಬಾಹು ವ್ಯಕ್ತಿಯನ್ನು ಹುಡುಕುತ್ತಲೇ ಇತ್ತು.ಊಟಕ್ಕೆ ಬಂದ ವ್ಯಕ್ತಿ ಮಾಯವಾದ ಕಥೆ ಕೆಲವೇ ಹೊತ್ತಲ್ಲಿ ಊರೆಲ್ಲಾ ಹರಡಿತು.
ಮರುದಿನ ಮುಂಜಾನೆ
ಶ್ರೀಲಕ್ಷ್ಮೀ0ದ್ರತೀರ್ಥರು ನನ್ನ ತಂದೆ ವಿಠಲ ಆಚಾರ್ಯರನ್ನು ತನ್ನ ಕೋಣೆಗೆ ಕರೆದು ಪೆನ್ಸಿಲಿನಲ್ಲಿ ಬರೆದ ಒಂದು ಚಿತ್ರವನ್ನು ನೀಡಿದರು.ನಿನ್ನೆ ನಾನು ನೋಡಿದ ವ್ಯಕ್ತಿಯ ಚಿತ್ರವಿದು.ಈತನ ಆಗಮನವನ್ನು ನಾನು ಮೊದಲೇ ನಿರೀಕ್ಷಿಸಿದ್ದೆ.
ಹಿರಿಯ ಯತಿಗಳೊಬ್ಬರು ಈ ಕುರಿತು ನನಗೆ ಮೊದಲೇ ಮಾಹಿತಿ ನೀಡಿದ್ದರು.
ಆಗಮಿಸಿದ ವ್ಯಕ್ತಿ ಮತ್ತಾರೂ ಅಲ್ಲ ಮಹಾಭಾರತದ
ದ್ರೋಣಾಚಾರ್ಯರ ಸುಪುತ್ರ ಚಿರಂಜೀವಿ ಹಾಗೂ ರುದ್ರಾಂಶರಾದ ಅಶ್ವತ್ತಾಮ ಆಚಾರ್ಯರು.
ನನ್ನ ಕಣ್ಣೆದುರಲ್ಲಿ ನಿಂದು ನನ್ನ ಕೈಯಿಂದಲೇ ತೀರ್ಥ ಸ್ವೀಕರಿಸಿದರೂ ಅವರನ್ನು ನಾನು ಗುರುತಿಸದೇ ಹೋದೆನಲ್ಲಾ ಎಂದು ಕಣ್ಣೀರಿಟ್ಟರು.
ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಅವರು ಶ್ರೀಕೃಷ್ಣನ ಸನ್ನಿಧಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸುತ್ತಾರೆ ಎಂದು ಹಿರಿಯ ಯತಿಗಳೊಬ್ಬರು ಇತ್ತೀಚೆಗೆ ಹೇಳಿದ್ದರು.
ಮಹಾಭಾರತದ ಯುದ್ದಾಂತ್ಯದಲ್ಲಿ
ಕೃಷ್ಣನ ಇಚ್ಛೆಗೆ ವಿರುದ್ಧವಾಗಿ ನಾರಾಯಣ ಅಸ್ತ್ರವನ್ನು ಉತ್ತರೆಯ ಮೇಲೆ ಅಶ್ವತ್ತಾಮ ಆಚಾರ್ಯರು ಪ್ರಯೋಗಿಸಿದ್ದರು.
ಈ ಮಹಾಪಾಪದ ಪ್ರಾಯಶ್ಚಿತ್ತಕ್ಕಾಗಿ ಅಂದಿನಿಂದ ಇಂದಿನವರೆಗೂ ಭಾರತದೇಶದ ಪ್ರಸಿದ್ದ ಕೃಷ್ಣ ಕ್ಷೇತ್ರಗಳ ದರ್ಶನ ಹಾಗೂ ಪ್ರಸಾದವನ್ನು ಅಶ್ವತ್ಥಾಮ ಆಚಾರ್ಯರು ಮಾರು ವೇಷದಲ್ಲಿ ಆಗಮಿಸಿ ಸ್ವೀಕರಿಸುವ ಸಂಗತಿ ಅನೇಕ ಜ್ಞಾನಿಗಳ ಗಮನಕ್ಕೆ ಬಂದಿದೆ.
ಈ ಭಾರೀ ಆಶ್ವತ್ತಾಮ ಆಚಾರ್ಯರು ಇಲ್ಲಿಗೆ ಬಂದರೂ ಬರಬಹುದು ಎಂದು ಎಚ್ಚರಿಸಿದ್ದರೂ ಕೂಡಾ ಅವರನ್ನು ಗುರುತಿಸಲು ವಿಫಲನಾದೆನಲ್ಲಾ ಎಂದು ಬಹಳ ದುಃಖಿಸಿದರು..
ಈ ಚಿತ್ರ ನಿನ್ನಲ್ಲೇ ಇರಲಿ..ಎಂದು ಹೇಳಿ ಶ್ರೀಪಾದರು ಕಣ್ಣಾರೆ ಕಂಡಿದ್ದ ತಾವೇ ಕೈಯಾರೆ ಬಿಡಿಸಿದ ಆಶ್ವತ್ತಾಮ ಆಚಾರ್ಯರ ಅಪೂರ್ವ ಚಿತ್ರವನ್ನು ನನ್ನ ತಂದೆಗೆ ಅಂದು ನೀಡಿದ್ದರು..
ಕೃಷ್ಣನ ಸನ್ನಿಧಾನಕ್ಕೆ ಅವಧೂತರು ಅಪರೋಕ್ಷ ಜ್ಞಾನಿಗಳು ದೇವಾಂಶ ಸಂಭೂತರು ಯಾವ್ಯಾವ ವೇಷದಲ್ಲಿ ಯಾವಾಗ ಎಂದು ಬರುತ್ತಾರೆ ಎಂಬುದು ಶ್ರೀಕೃಷ್ಣ ಮಾತ್ರ ಬಲ್ಲ...
ಎಂದು ತಂದೆಯವರು ಕಥೆ ಮುಗಿಸುವಾಗ ನನಗೂ ಕೂಡಾ ಒಮ್ಮೆ ಮಹಾಭಾರತದ ಅಶ್ವತ್ತಾಮ ಆಚಾರ್ಯರನ್ನು ಕಾಣಲೇಬೇಕೆಂಬ ಎಲ್ಲಿಲ್ಲದ ಹಂಬಲ..
ಹೀಗಾಗಿಯೇ ಕೃಷ್ಣ ಮಠದಲ್ಲಿ ಜರಗುವ ಪ್ರಮುಖ ಉತ್ಸವದ ಸಂದರ್ಭದಲ್ಲಿ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ವಿತರಣೆಯ ಪುಣ್ಯಕಾಯಕದಲ್ಲಿ ನಮ್ಮ ಕುಟುಂಬದ ಬಹುತೇಕರು ಅಂದಿನಿಂದ
ಇತ್ತೀಚಿನವರೆಗೂ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದೆವು.
ಈ ಸಂದರ್ಭದಲ್ಲಿ ಒಂದೆರಡು ಭಾರಿಯಾದರೂ ಅಶ್ವತ್ತಾಮಾಚಾರ್ಯರು ಮಾರುವೇಷದಲ್ಲಿ ಬಂದು ನಮ್ಮ ಸೇವೆ ಸ್ವೀಕರಿಸಿ ಹರಸಿರಬಹುದು ಎನ್ನುವ ಬಲವಾದ ನಂಬಿಕೆ ನಮ್ಮದು.
0 Comments